
ಬಳ್ಳಾರಿ,ನ. 1: ಬೇರೆ ಹಬ್ಬಗಳನ್ನು ಕೇವಲ ಮೂರ್ನಾಲ್ಕು ದಿನ ಆಚರಿಸಿದರೆ, ಕರ್ನಾಟಕ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ತಿಂಗಳ ಪೂರ್ತಿ ಹಬ್ಬದಂತೆ ಆಚರಿಸಲಾಗುತ್ತದೆ. ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿರುವ ಕರ್ನಾಟಕದಲ್ಲಿ ಸರ್ವ ಧರ್ಮೀಯರು ಅಣ್ಣ-ತಮ್ಮಂದಿರಂತೆ ಬದುಕುತ್ತಿರುವುದು ಈ ನಾಡಿನ ದೊಡ್ಡ ಹೆಮ್ಮೆ ಎಂದು ವಸತಿ ಸಚಿವರಾದ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು.
ಜಿಲ್ಲಾಡಳಿತ ನಗರದ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಶ್ರೀ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಕನ್ನಡ ಅತ್ಯಂತ ಸರಳ ಮತ್ತು ಸುಂದರವಾದ ಭಾಷೆಯಾಗಿದ್ದು, ಹೊರರಾಜ್ಯಗಳಿಂದ ಬಂದವರೂ ಇದನ್ನು ಸುಲಭವಾಗಿ ಕಲಿತು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಯುವಕರು ಸಿರಿತನಕ್ಕೆ ಹಿಗ್ಗದೆ, ಬಡತನಕ್ಕೆ ಕುಗ್ಗದೆ ಶ್ರಮವಹಿಸಿ ಬೆಳೆಯುವರೇ ನಾಡಿನ ಭವ್ಯ ಭವಿಷ್ಯ ಎಂದು ಹೇಳಿದರು.
ಬಡವರಿಗಾಗಿ ‘ಆರನೇ ಗ್ಯಾರಂಟಿ’ ಮನೆಗಳ ಯೋಜನೆ:
ರಾಜ್ಯ ಸರ್ಕಾರ ಬಡವರ ಕಲ್ಯಾಣಕ್ಕೆ ಬದ್ಧವಾಗಿದ್ದು, ಈಗಾಗಲೇ ಜಾರಿಗೆ ತಂದಿರುವ ಐದು ಪ್ರಮುಖ ಗ್ಯಾರಂಟಿಗಳ ಜೊತೆಗೆ ಬಡವರಿಗೆ ಸೂರು ಕಲ್ಪಿಸುವುದು ನಮ್ಮ ಸರ್ಕಾರದ ‘ಆರನೇ ಗ್ಯಾರಂಟಿ’ ಎಂದು ಸಚಿವರು ಪ್ರತಿಪಾದಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಜೂರಾಗಿದ್ದ 1,80,280 ಮನೆಗಳು ಫಲಾನುಭವಿಗಳು ವಂತಿಕೆ ಹಣ ಕಟ್ಟಲಾಗದೆ ಅರ್ಧಕ್ಕೆ ನಿಂತಿದ್ದವು. ಪ್ರತಿ ಮನೆಗೆ ತಗಲುವ ವೆಚ್ಚದಲ್ಲಿ ಫಲಾನುಭವಿಗಳು ರೂ. 4.5 ಲಕ್ಷ ಭರಿಸಬೇಕಾಗಿದ್ದು, ಬಡವರಿಗೆ ಇದು ಅಸಾಧ್ಯವಾಗಿತ್ತು. ಈ ಸಮಸ್ಯೆಯನ್ನು ಅರಿತ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟವು ಬಡವರ ಪಾಲಿನ ಹಣವನ್ನು ಭರಿಸಲು 4,700 ಕೋಟಿ ರೂ. ಅನುಮೋದನೆ ನೀಡಿದೆ ಎಂದರು.

ಹಂತ-ಹಂತವಾಗಿ ಮನೆಗಳ ವಿತರಣೆ:
2024ರ ಮಾರ್ಚ್ನಲ್ಲಿ ರಾಜ್ಯಾದ್ಯಂತ 36,789 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 42,345 ಮನೆಗಳನ್ನು ವಿತರಿಸಲಾಗಿದ್ದು, ಒಟ್ಟಾರೆ ಸರ್ಕಾರದಿಂದ 79,000 ಮನೆಗಳನ್ನು ಪೂರ್ಣಗೊಳಿಸಿ ಕೊಡಲಾಗಿದೆ. ಉಳಿದ 33,000 ಮನೆಗಳನ್ನು ಮುಂಬರುವ ವರ್ಷದ ಫೆಬ್ರವರಿ 27ರೊಳಗೆ ಪೂರ್ಣಗೊಳಿಸಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ನಗರ ಶಾಸಕ ಭರತ್ ರೆಡ್ಡಿ ಅವರ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ಮಂಜೂರಾಗಿದ್ದ ಮನೆಗಳಿಗೂ ಸರ್ಕಾರದ ವತಿಯಿಂದಲೇ ಹಣ ಒದಗಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಸುಮಾರು 2,000 ಮನೆಗಳು ಸಿದ್ಧವಾಗಿದ್ದು, ಶೀಘ್ರದಲ್ಲೇ ಕ್ಯಾಬಿನೆಟ್ ಒಪ್ಪಿಗೆ ಪಡೆದು ಬಡವರಿಗೆ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.

ಸಾಧಕರಿಗೆ ಸನ್ಮಾನ: 2026ನೇ ಸಾಲಿನ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಂಸ್ಕೃತಿಕ (ರಂಗಭೂಮಿ): ಬಸವರಾಜ ಜೋಳದರಾಶಿ, ಬಳ್ಳಾರಿ
ಸಾಂಸ್ಕೃತಿಕ (ಜಾನಪದ): ಹೆಚ್.ಪಿ. ಶಿಕಾರಿ ರಾಮು, ಕಂಪ್ಲಿ
ಕನ್ನಡ ಸೇವೆ: ಕೆ. ಎಂ. ಮಹೇಶ್ವರ ಸ್ವಾಮಿ, ಬಳ್ಳಾರಿ
ಕ್ರೀಡೆ (ಈಜು): ರಜಿನಿ ಲಕ್ಕ, ಬಳ್ಳಾರಿ
ಸಮಾಜ ಸೇವೆ: ಜಿ. ವೀರೇಶ, ಸಂಡೂರು ಹಾಗೂ ಪಿ. ಹುಸೇನ್ ಸಾಹೇಬ್, ಬಳ್ಳಾರಿ
ವೈದ್ಯಕೀಯ: ಯೋಗಾನಂದ ರೆಡ್ಡಿ, ವೈ.ಸಿ., ಬಳ್ಳಾರಿ
ಪತ್ರಿಕೋದ್ಯಮ: ಎನ್. ವೀರಭದ್ರಗೌಡ, ಬಳ್ಳಾರಿ
ಕೃಷಿ: ಎಸ್. ಸಾದಣ್ಣ, ತೆಕ್ಕಲಕೋಟೆ (ಸಿರುಗುಪ್ಪ ತಾಲ್ಲೂಕು)
ಕೃಷಿ – ತೋಟಗಾರಿಕೆ: ಚಲವಾದಿ ದೊಡ್ಡಬಸಪ್ಪ, ಮುಷ್ಠಗಟ್ಟೆ (ಕುರುಗೋಡು ತಾಲ್ಲೂಕು).
ರಾಜ್ಯೋತ್ಸವ ಅಂಗವಾಗಿ ಶಾಲೆ ಮತ್ತು ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಆಶು-ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕನ್ನಡ ಪ್ರೇಮಿಗಳ ನೇತೃತ್ವದಲ್ಲಿ ಹಂಪಿಯ ತಾಯಿ ಭುವನೇಶ್ವರಿ ದೇವಸ್ಥಾನದಿಂದ ಪ್ರತಿವರ್ಷದಂತೆ ಈ ವರ್ಷವೂ ತಂದ ಕನ್ನಡ ಜ್ಯೋತಿಯನ್ನು ಸಚಿವರ ಸಮ್ಮುಖದಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಬಳಿಕ ವಿವಿಧ ಪ್ರಕಾರ ಕಲಾ ತಂಡಗಳ ವಾದ್ಯಗಳ ಕಲರವದೊಂದಿಗೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳನ್ನೊಳಗೊಂಡ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಕನ್ನಡ ಪ್ರೇಮ ಮೂಡಿಸಲಾಯಿತು.

ಸ್ತಬ್ಧಚಿತ್ರಗಳ ಅದ್ದೂರಿ ಮೆರವಣಿಗೆ: ರಾಜ್ಯೋತ್ಸವ ಹಾಗೂ ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ತಬ್ಧಚಿತ್ರಗಳ ಅದ್ದೂರಿ ಮೆರವಣಿಗೆಗೆ
ಸಚಿವ ಜಮೀರ್ ಅಹ್ಮದ್ ಖಾನ್ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು, ಕೃಷಿ ಚಟುವಟಿಕೆಗಳು ಹಾಗೂ ಸಂಸ್ಕೃತಿಯ ಪ್ರಾಯೋಗಿಕ ಪರಿಚಯ ಮಾಡಿಕೊಡುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕರ್ನಾಟಕ, ಜಿಲ್ಲಾ ಯೋಜನಾ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ‘ಗ್ರಾಮಾನುಭವ’ ಎಂಬ ವಿನೂತನ ಕಾರ್ಯಕ್ರಮವನ್ನು ವಸತಿ ಸಚಿವರು
ಉದ್ಘಾಟಿಸಿದರು. 
ಸಮಾರಂಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆಯ ಮಹಾಪೌರರಾದ ಪಿ. ಗಾದೆಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಪಿ.ಎಸ್.ಹರ್ಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್ ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ-ಸಿಬ್ಬಂದಿ, ಮಹಾನಗರ ಪಾಲಿಕೆ ಸದಸ್ಯರು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಉಪಸ್ಥಿತರಿದ್ದರು.
*****
