“ಸಮಸ್ತ ಕನ್ನಡ ಕುಲಕೋಟಿಗೆ ಹೆಮ್ಮೆಯ 71 ನೇ ಕನ್ನಡರಾಜ್ಯೋತ್ಸವದ ಹೃದಯಪೂರ್ವಕ ಶುಭಾಶಯಗಳು..”
ಇದು ನಮ್ಮ-ನಿಮ್ಮೆಲ್ಲರ ರಾಜ್ಯೋತ್ಸವ ದಿನದ ಜೀವ ಝೇಂಕಾರದ ಹೃದ್ಯಕವಿತೆ. ಪ್ರತಿ ಕನ್ನಡಿಗರ ಹೆಮ್ಮೆ ಅಭಿಮಾನಗಳ ಭಾವ-ಭಾಷ್ಯಗಳ ದಿವ್ಯಗೀತೆ. ಕನ್ನಡ ಭುವನೇಶ್ವರಿಗೆ ಬೆಳಗಿದೆ ಅಕ್ಕರೆ ಆರಾಧನೆಗಳ ಅಕ್ಷರಪ್ರಣತೆ. ಒಲುಮೆಯ ಅಕ್ಷರಬಂಧುಗಳೇ ನಿಮ್ಮ ಎದೆಯಂಗಳಕೆ ನಲುಮೆಯಿಂದ ಅರ್ಪಿಸುತ್ತಿದ್ದೇನೆ.. ಒಪ್ಪಿಸಿಕೊಳ್ಳಿ..” -ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ರಾಜ್ಯೋತ್ಸವದ ಜೀವಗಾನ.!
ಕನ್ನಡದ ಪ್ರಾಂತ್ಯಗಳೆಲ್ಲ ಒಟ್ಟುಗೂಡಿದ ಸುದಿನ
ಭವ್ಯ ಕನ್ನಡನಾಡಾಗಿ ಉದಯಿಸಿದ ಮಹಾದಿನ
ಕೋಟಿಕೋಟಿ ಕನಸುಗಳು ಸಾಕಾರವಾದ ದಿನ
ಕನ್ನಡಿಗರ ಶತಮಾನಗಳ ತಪಸು ಫಲಿಸಿದ ದಿನ.!
ಮಾತೆ ಚಾಮುಂಡೇಶ್ವರಿ ಅನುಗ್ರಹದ ಪುಣ್ಯದಿನ
ತಾಯಿ ಭುವನೇಶ್ವರಿ ಪೀಠವನೇರಿದ ಪವಿತ್ರದಿನ
ಹಂಪಿ ವಿರೂಪಾಕ್ಷ ಆಶೀರ್ವದಿಸಿದ ಪಾವನದಿನ
ಸಾಧುಸಂತರೆಲ್ಲ ಪೂಜಿಸಿದ ಕರುನಾಡ ಜನ್ಮದಿನ.!
ಹಾರುತಿಹುದು ಹೆಮ್ಮೆಯಲಿ ಕರ್ನಾಟಕ ಬಾವುಟ
ಕಣ್ಸೆಳೆವ ಕೆಂಪು ಹಳದಿಯ ರಂಗುಗಳ ದಿವ್ಯಪಟ
ಮೊಳಗಿದೆ ದಿಗ್ದಿಗಂತಗಳಲು ಕನ್ನಡದ ಡಿಂಡಿಮ
ಕರುನಾಡ ಕಣಕಣದಿ ರಾಜ್ಯೋತ್ಸವ ಸಂಭ್ರಮ.!
ಮೆರೆದಿದೆ ಊರೂರಿನಲ್ಲು ಹಚ್ಚಹಸಿರ ತೋರಣ
ಮೊಳಗಿದೆ ಬೀದಿಬೀದಿಯಲ್ಲು ನಾಡಗೀತೆ ರಿಂಗಣ
ಮೊರೆದಿದೆ ಮನೆಮನೆಯಲ್ಲು ಸಂತಸದ ಹೂರಣ
ಮಿನುಗಿದೆ ಮನಮನದಲ್ಲೂ ಅಭಿಮಾನದ ಕಿರಣ.!
ಭೋರ್ಗರೆದಿದೆ ಎಲ್ಲೆಡೆ ಕನ್ನಡನುಡಿ ಮಾಧುರ್ಯ
ಜಗವ ಸೆಳೆದಿದೆ ನೆಲ ಜಲ ಪ್ರಕೃತಿಯ ಸೌಂದರ್ಯ
ಹೊಳೆದಿದೆ ಕನ್ನಡಿಗರ ಸಾಧನೆ ಕೀರ್ತಿ ಔದಾರ್ಯ
ಲೋಕವ ಬೆಳಗಿದೆ ಕರುನಾಡಿನ ಪ್ರೀತಿ ಆಂತರ್ಯ.!
ಕೇಳುತಿಹುದು ಕವಿಕೋಗಿಲೆಗಳ ಸಿಹಿಕಾವ್ಯ ಕಲರವ
ವಿಶ್ವವನೇ ಬೆರಗಾಗಿಸಿದೆ ಶಿಲ್ಪಕಲೆಯ ಮಹಾವೈಭವ
ಅಷ್ಟದಿಕ್ಕುಗಳಲು ಅನುರಣಿಸಿದೆ ಸಂಗೀತ ಸಿರಿವೈಭವ
ಬುವಿಯನೇ ಮುನ್ನಡೆಸಿದೆ ಸಂತ ಶರಣ ಅನುಭಾವ.!
ರಾಜ್ಯೋತ್ಸವದ ಈದಿನ ಸವಿ ಸಂತಸ ಸಂವರ್ಧನ
ಕನ್ನಡ ರಾಜರಾಜೇಶ್ವರಿಯ ಭವ್ಯ ದಿವ್ಯ ಸಂಕೀರ್ತನ
ಕನ್ನಡಿಗರ ಸ್ವರ-ಸ್ವರದಲ್ಲೂ ಸಡಗರಗಳ ಸಂಚಲನ
ಧಮನಿ-ಧಮನಿಗಳಲ್ಲೂ ಸಂಭ್ರಮದ ಭಾವಯಾನ.!

-ಎ.ಎನ್.ರಮೇಶ್.ಗುಬ್ಬಿ.
