11 ತಿಂಗಳ ಸುದೀರ್ಘ ನಿರೀಕ್ಷೆಗೆ ತೆರೆ: ಅಕಾಡೆಮಿಕ್ ಕೋ-ಆರ್ಡಿನೇಟರ್‌ಗಳಿಂದ ಡಿಸಿಇ ಅಧಿಕಾರಿಗಳಿಗೆ ಸನ್ಮಾನ

ಬೆಂಗಳೂರು, ನ.2: ಸುಮಾರು 11 ತಿಂಗಳ ಸುದೀರ್ಘ ನಿರೀಕ್ಷೆಯ ಬಳಿಕ ಶೈಕ್ಷಣಿಕ‌ ಸಂಯೋಜಕರ (ಅಕಾಡೆಮಿಕ್ ಕೋ-ಆರ್ಡಿನೇಟರ್) ಹುದ್ದೆಯ ಕೌನ್ಸೆಲಿಂಗ್ ಹಾಗೂ ಕಾರ್ಯಸ್ಥಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಶಿಕ್ಷಣ ವಿಭಾಗದ ಆಯುಕ್ತರಾದ ಡಾ. ಎಚ್.ಎನ್. ಗೋಪಾಲಕೃಷ್ಣ, ಮುಖ್ಯ ಆಡಳಿತಾಧಿಕಾರಿ  ಶ್ರೀಮತಿ ಟಿ.ಆರ್. ಶೋಭಾ ಹಾಗೂ  ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ಶೋಭಾ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು.                                       ಜೊತೆಗೆ ಇಲಾಖೆಯ ಇತರ ಅಧಿಕಾರಿ ವರ್ಗದವರಿಗೂ ಸನ್ಮಾನ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಲಾಯಿತು.

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ -ಆಯುಕ್ತರ ಸಲಹೆ:  ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಚ್.ಎನ್. ಗೋಪಾಲಕೃಷ್ಣ ಅವರು,  ಅಧಿಕೃತ ಆದೇಶ ಶೀಘ್ರದಲ್ಲೇ ಬರಲಿದ್ದು, ಹುದ್ದೆಗೆ ಸೇರಿದ ನಂತರ ಎಲ್ಲರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ, ಪ್ರಾಮಾಣಿಕತೆ, ಶಿಸ್ತು ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಿ ಇಲಾಖೆಗೆ ಉತ್ತಮ ಹೆಸರು ತರಬೇಕು ಎಂದು ಸಲಹೆ ನೀಡಿದರು.

ಆಯುಕ್ತರ ಈ ಸಲಹೆಯನ್ನು ಅಭ್ಯರ್ಥಿಗಳು ಸ್ವಾಗತಿಸಿ, ತಮಗೆ ದೊರೆತಿರುವ ಅವಕಾಶವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದಾಗಿ ಭರವಸೆ ನೀಡಿದರು.

11 ತಿಂಗಳ ಕಾಯುವಿಕೆಗೆ ಹೊಸ ಭರವಸೆ: ಹಿಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ನಾನ್ ಯುಜಿಸಿ) ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಅಕಾಡೆಮಿಕ್ ಕೋ-ಆರ್ಡಿನೇಟರ್ ಹುದ್ದೆಯ ಅವಕಾಶ ದೊರೆತಿರುವುದು 11 ತಿಂಗಳ ಸುದೀರ್ಘ ನಿರೀಕ್ಷೆಯ ಬಳಿಕ ಹೊಸ ಭರವಸೆ ಮೂಡಿಸಿದೆ. ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳು ತಮ್ಮ ಕಾರ್ಯಸ್ಥಳವನ್ನೂ ಈಗಾಗಲೇ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅಧಿಕಾರಿ ವರ್ಗ ನೀಡಿದ ಸಹಕಾರ, ಮಾರ್ಗದರ್ಶನ ಮತ್ತು ಸ್ಪಂದನೆಗೆ ಅಭ್ಯರ್ಥಿಗಳು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಅವಕಾಶವನ್ನು ಸೇವೆಯಾಗಿ ಸ್ವೀಕರಿಸುವ ಸಂಕಲ್ಪ ವನ್ನು ಅಕಾಡೆಮಿಕ್ ಕೋ-ಆರ್ಡಿನೇಟರ್ ಹುದ್ದೆ ಪಡೆದ ಪ್ರಮುಖರಾದ ಪಾಲಯ್ಯ, ಸುನೀತಾ, ಗಂಗಲಕ್ಷ್ಮೀ, ವರಲಕ್ಷ್ಮೀ, ಯೋಗೇಂದ್ರ, ಹರೀಶ್ ಡಿ.ಎಲ್., ಭರತೇಶ ಎಂ., ಹರೀಶ್, ಲಕ್ಷ್ಮೀನಾರಾಯಣ ರೆಡ್ಡಿ, ರಮೇಶ್ ಹಾಗೂ ಸುವರ್ಣ, ರವಿ ಸ್ಥಾನಿಕ, ಸೇರಿದಂತೆ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಅಭ್ಯರ್ಥಿಗಳು ಮಾತನಾಡಿ, 11 ತಿಂಗಳ ಸುದೀರ್ಘ ಕಾಯುವಿಕೆಯ ನಂತರ ದೊರೆತಿರುವ ಈ ಅವಕಾಶ ನಮಗೆ ಹೊಸ ಜವಾಬ್ದಾರಿಯನ್ನು ನೀಡಿದೆ. ಅಧಿಕಾರಿಗಳು ನೀಡಿದ ಮಾರ್ಗದರ್ಶನವನ್ನು ಗೌರವಿಸಿ, ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ, ಪ್ರಾಮಾಣಿಕತೆ, ನಿಷ್ಠೆ ಮತ್ತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತೇವೆ ಎಂದು ತಿಳಿಸಿದರು.

ಅಕಾಡೆಮಿಕ್ ಕೋ-ಆರ್ಡಿನೇಟರ್‌ಗಳಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ ಇಲಾಖೆಯ ಉದ್ದೇಶಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಿ, ವಿದ್ಯಾರ್ಥಿಗಳು ಹಾಗೂ ಕಾಲೇಜುಗಳ ಶೈಕ್ಷಣಿಕ ಪ್ರಗತಿಗೆ ತಮ್ಮ ಕೊಡುಗೆ ನೀಡುವುದಾಗಿ ಅಭ್ಯರ್ಥಿಗಳು ಸಂಕಲ್ಪ ವ್ಯಕ್ತಪಡಿಸಿದರು.

11 ತಿಂಗಳ ನಿರೀಕ್ಷೆ, ಹಲವು ಮನವಿಗಳು ಮತ್ತು ನಿರಂತರ ಪ್ರಯತ್ನಗಳ ಬಳಿಕ ಕೌನ್ಸೆಲಿಂಗ್ ಹಾಗೂ ಕಾರ್ಯಸ್ಥಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿರುವುದು ಅಭ್ಯರ್ಥಿಗಳಲ್ಲಿ ಸಂತಸ ಮೂಡಿಸಿದ್ದು, ಈ ಪ್ರಕ್ರಿಯೆಗೆ ಕಾಂಗ್ರೆಸ್ ಸರ್ಕಾರಕ್ಕೂ ಹಾಗೆ ಸಹಕರಿಸಿದ ಕಾಲೇಜು ಶಿಕ್ಷಣ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ ಅಧಿಕಾರಿ ವರ್ಗದವರಿಗೆ ಅಭ್ಯರ್ಥಿಗಳು ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *