ಬಳ್ಳಾರಿ, ನ.4: ರಾಜ್ಯದಲ್ಲಿ ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಹಾಗೂ ವಕೀಲರ ಹಿತರಕ್ಷಣೆ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವಂತೆ ಆಗ್ರಹಿಸಿ ಬಳ್ಳಾರಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಮ್ ಬ್ರಹ್ಮ ನೇತೃತ್ವದಲ್ಲಿ ಮಂಗಳವಾರ ವಕೀಲರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಬ್ರಹ್ಮ ಅವರು,
ರಾಜ್ಯದ ವಿವಿಧ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ವಕೀಲರು ಭಯದ ವಾತಾವರಣದಲ್ಲಿ ವೃತ್ತಿ ನಿರ್ವಹಿಸುವಂತಾಗಿದೆ. ವಕೀಲರು ಯಾವುದೇ ಆತಂಕವಿಲ್ಲದೆ ನಿರ್ಭೀತಿಯಿಂದ ತಮ್ಮ ವೃತ್ತಿ ನಿರ್ವಹಿಸಲು ಅಗತ್ಯ ರಕ್ಷಣೆ ಒದಗಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ವಕೀಲರ ಹಿತರಕ್ಷಣೆ ಕಾಯ್ದೆ 2020-23ರಲ್ಲಿ ಸಾಕಷ್ಟು ಲೋಪಗಳಿದ್ದು, ಕಾಯ್ದೆಯ ಕಲಂ 4ರ ಅಡಿಯಲ್ಲಿ ನಿಗದಿಪಡಿಸಿರುವ ಆರು ತಿಂಗಳಿಂದ ಮೂರು ವರ್ಷಗಳವರೆಗಿನ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕು. ಅಲ್ಲದೆ, ವಕೀಲರ ಮೇಲಿನ ಹಲ್ಲೆ ಪ್ರಕರಣಗಳನ್ನು ಜಾಮೀನು ರಹಿತ ಅಪರಾಧಗಳೆಂದು ಪರಿಗಣಿಸುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು, ಈಗಿರುವ ಕಾಯ್ದೆ ವಕೀಲರಿಗೆ ಸಮರ್ಪಕ ರಕ್ಷಣೆ ನೀಡುವಲ್ಲಿ ವಿಫಲವಾಗಿದ್ದು, ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕಾನೂನು ಬದಲಾವಣೆಗಳನ್ನು ಮಾಡಬೇಕಿದೆ ಎಂದರು. ರಾಜ್ಯದ ವಿವಿಧೆಡೆ ವಕೀಲರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳ ಆರೋಪಿಗಳನ್ನು ತಕ್ಷಣ ಬಂಧಿಸಿ, ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ವಿಧಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ವಕೀಲರ ಹಿತರಕ್ಷಣೆ ಕಾಯ್ದೆ 2020-23ಕ್ಕೆ ಅಗತ್ಯ ತಿದ್ದುಪಡಿಗಳನ್ನು ಮಂಡಿಸಿ ಅನುಮೋದನೆ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಕೋರಿದ್ದಾರೆ.
ಪ್ರತಿಭಟನೆಯಲ್ಲಿ ನಿವೃತ್ತ ಪಬ್ಲಿಕ್ ಟ್ರಾಸಿಕ್ಯೂಟರ್ ಹಾಗೂ ಹಿರಿಯ ವಕೀಲರಾದ ಬಿ. ಜಯರಾಮ್ , ವಕೀಲರ ಸಂಘದ ಉಪಾಧ್ಯಕ್ಷ ಯಶೋಧರ ಮೂರ್ತಿ, ಕಾರ್ಯದರ್ಶಿ ಅನ್ವರ್ ಬಾಷಾ, ಜಂಟಿ ಕಾರ್ಯದರ್ಶಿ ಎರೆಮ್ಮ, ಖಜಾಂಚಿ ಆರ್. ಭಾಷಾ, ಪ್ರಕಾಶ್ ಗೌಡ, ನಾಗರಾಜ್ ಸೇರಿದಂತೆ ಹಲವು ವಕೀಲರು ಭಾಗವಹಿಸಿದ್ದರು.
