ಬಳ್ಳಾರಿ. ನ. 4 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿದಾರರಿಗೆ ಕಲ್ಪಿಸಿರುವ ವಿವಿಧ ಸೌಲಭ್ಯಗಳು ಮತ್ತು ಶೇ.4ರಷ್ಟು ಮೀಸಲಾತಿಯ ಪ್ರಯೋಜನಗಳು ಅರ್ಹ ಸಮುದಾಯದ ಉದ್ಯಮಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉದ್ಯಮಿಗಳಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಹಾಗೂ ಸ್ವಾವಲಂಬಿ ಉದ್ಯಮಿಗಳನ್ನಾಗಿ ರೂಪಿಸುವ ಉದ್ದೇಶದಿಂದ ಮೈಸೂರು ಆಟೋಮೋಟಿವ್ ಚೇಂಬರ್ಸ್ ಸಂಸ್ಥೆಯ ವತಿಯಿಂದ ನ.17ರಂದು ನಗರದ ನಕ್ಷತ್ರ ಹೋಟೆಲ್ ನಲ್ಲಿ ಒಂದು ದಿನದ ವಿಶೇಷ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದರು.
ಅವರು ಬುಧವಾರ ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನ.17ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿನಗರದ ಮೋಕಾ ರಸ್ತೆಯಲ್ಲಿರುವ ನಕ್ಷತ್ರ ಹೋಟೆಲ್ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ರಾಷ್ಟ್ರೀಯ ಎಸ್‌ಸಿ/ಎಸ್‌ಟಿ ಹಬ್, ಎಂಎಸ್‌ಎಂಇ, ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ), ಪವರ್‌ಗ್ರಿಡ್, ಎನ್‌ಎಂಡಿಸಿ, ಎಫ್‌ಸಿಐ, ಕೆಎಸ್‌ಎಫ್‌ಸಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಿಪುಣ ಅಧಿಕಾರಿಗಳಿಂದ ಶಿಬಿರದಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಪ್ರಸ್ತುತ ಉದ್ಯಮ ನಡೆಸುತ್ತಿರುವವರು ಹಾಗೂ ಹೊಸದಾಗಿ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ಯುವಕ-ಯುವತಿಯರಿಗೆ ಉದ್ಯಮಶೀಲತೆ ಕುರಿತು ಪ್ರಾಯೋಗಿಕ ಮಾಹಿತಿ ನೀಡುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ಡಿಜಿಟಲ್ ಮಾರ್ಕೆಟಿಂಗ್, ಟ್ವಿಟರ್, ವಾಟ್ಸಾಪ್, ಫೇಸ್‌ಬುಕ್ ಬಳಕೆ ಹಾಗೂ ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜಿಇಎಂ (GeM) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುವುದು. ಇದರೊಂದಿಗೆ ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ಕೇಂದ್ರ ಸರ್ಕಾರದ ಖರೀದಿ ನೀತಿಯಡಿ ಲಭ್ಯವಿರುವ ಶೇ.4ರಷ್ಟು ಮೀಸಲಾತಿ ಸೌಲಭ್ಯವನ್ನು ಪಡೆದುಕೊಳ್ಳುವ ಮಾರ್ಗಗಳ ಬಗ್ಗೆಯೂ ಅರಿವು ಮೂಡಿಸಲಾಗುವುದು ಎಂದರು.
ಸಮಗ್ರ ಕರ್ನಾಟಕ, ಸಮೃದ್ಧ ಕರ್ನಾಟಕ’ ಪರಿಕಲ್ಪನೆಯೊಂದಿಗೆ ಯುವ ಪುರುಷರು ಮತ್ತು ಮಹಿಳೆಯರನ್ನು ಉದ್ಯಮಶೀಲತೆಯತ್ತ ಪ್ರೇರೇಪಿಸಿ, ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ತೇಜನ ನೀಡುವುದು ಸಂಸ್ಥೆಯ ಆಶಯವಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಈ ನಿಟ್ಟಿನಲ್ಲಿ ಕೈಗಾರಿಕಾ ಕ್ರಾಂತಿಗೆ ಹೊಸ ಅಧ್ಯಾಯ ಬರೆಯುವ ಸಂಕಲ್ಪದೊಂದಿಗೆ ಮೈಸೂರು ಆಟೋಮೋಟಿವ್ ಚೇಂಬರ್ಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು. ಸಮಾಜದ ಬಂಧುಗಳು, ಉದ್ಯಮಾಸಕ್ತರು ಹಾಗೂ ಯುವಜನರು ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಂಜುನಾಥ್ ಮನವಿ ಮಾಡಿದರು.
ಒಂದೇ ವೇದಿಕೆಯಲ್ಲಿ ವಿವಿಧ ಕೈಗಾರಿಕಾ ವಲಯಗಳು, ಹಣಕಾಸು ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳ ಮಾಹಿತಿ ಮತ್ತು ಪ್ರದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆಸಕ್ತ ಉದ್ಯಮಿಗಳು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, ಸರ್ಕಾರದ ವಿವಿಧ ಯೋಜನೆಗಳು, ಸಾಲ ಸೌಲಭ್ಯಗಳು ಮತ್ತು ಉದ್ಯಮ ಅಭಿವೃದ್ಧಿಗೆ ಪೂರಕವಾದ ಅವಕಾಶಗಳ ಕುರಿತು ನೇರವಾಗಿ ಮಾಹಿತಿ ಪಡೆಯಬಹುದು. ಕೇವಲ ಒಂದು ದಿನದ ಕಾರ್ಯಾಗಾರಕ್ಕೆ ಸೀಮಿತವಾಗದೆ, ಮುಂದಿನ ದಿನಗಳಲ್ಲಿಯೂ ನವೋದ್ಯಮಿಗಳು ಹಾಗೂ ಈಗಾಗಲೇ ಉದ್ಯಮ ನಡೆಸುತ್ತಿರುವವರಿಗೆ ನಿರಂತರ ಮಾರ್ಗದರ್ಶನ ಮತ್ತು ಸಂಪರ್ಕ ಸೇತುವೆಯಾಗಿ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿಗಳಾದ ತಿಮ್ಮಪ್ಪ ಜೋಳದರಾಶಿ, ರಾಮಕೃಷ್ಣ, ಎಸ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
