
ಪ್ರೀತಿಯ ಕನ್ನಡದ ಮೇಷ್ಟ್ರು ಪ್ರೊ. ಕೆ. ವಿ. ನಾರಾಯಣ್ ಅವರು ಶುಕ್ರವಾರ ಅಗಲಿದ್ದಾರೆ ಎಂಬ ಸುದ್ದಿ ಬೆಳ್ಳಂಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡಿತು ಹಾಗೂ ಆತ್ಮೀಯ ಗೆಳೆಯರ ದೂರವಾಣಿ ಕರೆಗಳ ಮೂಲಕ ಅತೀವ ದುಃಖ ಭರಿತವಾಗಿ ಕೇಳಿಸಿತು. ಆತ್ಮೀಯರ ದುಃಖದ ಮಾತುಗಳೊಂದಿಗೆ ನನ್ನ ದುಃಖದ ಮಾತುಗಳು ಸಹ ಸೇರ್ಪಡೆಗೊಂಡು ತಮಗೆ ತಾವೇ ಕಣ್ಣೀರಿನೊಂದಿಗೆ ಮೌನವಾದವು.
ಪ್ರೊಫೆಸರ್ ಕೆವಿನಾ ಅವರು ನನ್ನ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರದವರು.
ಬೌದ್ಧಿಕ ಹಿನ್ನೆಲೆಯ ಜನ ವರ್ಗ ಹಾಗೂ ವಿದ್ವತ್ಲೋಕದಲ್ಲಿ ಪ್ರೊ. ಕೆ ವಿ ಎನ್ ಎಂದೆ ಚಿರಪರಿಚಿತರಾಗಿದ್ದ ಪೂಜ್ಯರು ನಮ್ಮೆಲ್ಲರಿಗೂ ಪ್ರೀತಿಯ ಮೇಷ್ಟ್ರು.
1990ರಲ್ಲಿ ಕನ್ನಡ- ಕನ್ನಡಿಗ- ಕರ್ನಾಟಕಕ್ಕಾಗಿ ಸ್ಥಾಪನೆಗೊಂಡ ಕನ್ನಡ ವಿಶ್ವವಿದ್ಯಾಲಯ -ಹಂಪಿಯ ಸದೃಢವಾದ ಬೆಳವಣಿಗೆಯ ಆಧಾರ ಕಂಬಗಳಲ್ಲಿ ಪ್ರೊ. ಚಂದ್ರಶೇಖರ್ ಕಂಬಾರರಷ್ಟೇ ಪ್ರಮುಖವಾದವರು. ಇವರೆಲ್ಲರೂ ನೆಟ್ಟಿದ ಬೌದ್ಧಿಕ ಕಂಬದ ಆಧಾರದ ಮೇಲೆಯೇ ಕನ್ನಡ ವಿಶ್ವವಿದ್ಯಾಲಯ ಇಂದು ಸದೃಢವಾಗಿ ನಿಂತಿರುವುದು, ನಾಡಿನಾದ್ಯಂತ ನಡೆದಾಡುತ್ತಿರುವುದು ಹಾಗೂ ಮಾತನಾಡುತ್ತಿರುವುದು.
1997ರಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅಧ್ಯಾಪಕನಾಗಿ ಬಂದ ನನಗೆ ಹಾಗೂ ನನ್ನ ಕೆಲವು ಸಹೋದ್ಯೋಗಿಗಳಿಗೆ ಜ್ಞಾನದ ಮಾರ್ಗದರ್ಶನ ನೀಡಿದವರು. ಪೂಜ್ಯರ ಮಾತು, ಮಾತಿನ ನಿಖರತೆ ಹಾಗೂ ಸ್ಪಷ್ಟತೆ ನಮಗೆ ಆದರ್ಶಗಳಾದವು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಸುಧೀರ್ಘ ವರ್ಷಗಳ ಕಾಲ ಕುಲಸಚಿವರಾಗಿ – ಅಧ್ಯಯನಂಗದ ನಿರ್ದೇಶಕರಾಗಿ – ನಾಲ್ಕು ಬಾರಿ ಹಂಗಾಮಿ ಕುಲಪತಿಗಳಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಪ್ರೀತಿಯ ನಮ್ಮ ಮೇಷ್ಟ್ರು ಕನ್ನಡ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಚಿರಸ್ತಾಯಿಯಾಗಿ ಉಳಿದುಕೊಂಡಿದ್ದಾರೆ. ಚಂದ್ರಶೇಖರ ಕಂಬಾರರು ಹಾಗೂ ಕೆ ವಿ ನಾರಾಯಣ ಅವರು ರೂಪಿಸಿದ ಅಧಿನಿಯಮ- ಪರಿನಿಮಗಳೇ ಇಂದಿಗೂ ವಿಶ್ವವಿದ್ಯಾಲಯವನ್ನು ಗಟ್ಟಿತನದಿಂದ ಉಳಿಸಿರುವುದು ಹಾಗೂ ಬೆಳೆಸುತ್ತಿರುವುದು.
ಮೇಷ್ಟ್ರ.. ಸಾಹಿತ್ಯ ರಚನೆ , ವೈಜ್ಞಾನಿಕ ಹಿನ್ನೆಲೆಯ ವಿಶ್ಲೇಷಣೆ ಹಾಗೂ ಖಚಿತವಾದ ತರ್ಕಬದ್ದವಾದ ಅವರ ಮಾತುಗಳು ನಮ್ಮಂತವರಿಗೆ ಆದರ್ಶಗಳಾಗಿದ್ದವು. ಈ ಹಿನ್ನೆಲೆಯ ಅವರ ಸಾಹಿತ್ಯ ಓದಿಕೊಂಡು – ಅವರ ಮಾತುಗಳನ್ನು ಕೇಳಿಕೊಂಡು ನಮ್ಮ ಚಿಂತನೆ ಹಾಗೂ ಬರವಣಿಗೆಯನ್ನು ಪರಿಸ್ಕರಿಸಿಕೊಂಡವರು ನಾವು. ಚರಿತ್ರೆ ವಿದ್ಯಾರ್ಥಿಯಾದ ನನಗೆ ಸಾಹಿತ್ಯದ ಮೂಲಕ ಚರಿತ್ರೆಯನ್ನು ನೋಡುವ ಪರಿಯನ್ನು ವಸ್ತುನಿಷ್ಠವಾಗಿ ಪರಿಚಯಿಸಿದವರು ಕೆವಿಎನ್ ಮೇಷ್ಟ್ರು.
ನಾನು ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಒಡಲಾಳದ ಚಿಂತನೆಯ ಹಿನ್ನೆಲೆಯಲ್ಲಿ ಗ್ರಹಿಸಿ – ಕನ್ನಡ ನಾಡಿನ ದಲಿತ ಸಮುದಾಯ ಕುರಿತು ನಾನು ಬರೆದ ಸಾಹಿತ್ಯ- ಚಿಂತನೆಯ ಕೃತಿಗಳು
ಹಾಗೂ
ಆಧುನಿಕ ಮೈಸೂರು ಸಂಸ್ಥಾನದ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿನ ದಲಿತರ ಸ್ಥಿತಿ-ಗತಿ ಕುರಿತು ನಾನು ಬರೆದ ಕೃತಿಗಳನ್ನು ಮೇಷ್ಟ್ರು ಅತೀವವಾಗಿ ಪ್ರೀತಿಯಿಂದ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವಾದ ಮಾಡಿದ್ದರು. ಇವರ ಆಶೀರ್ವಾದದ ಮಾತುಗಳೇ ನನಗೆ ಆದರ್ಶ. ನವ ಕರ್ನಾಟಕದಿಂದ ನನ್ನ ಸಂಪಾದನೆ ಹಾಗೂ ರಚನೆಯಲ್ಲಿ ಹೊರಬಂದ “ಕರ್ನಾಟಕದ ಸಮಗ್ರ ದಲಿತ ಚರಿತ್ರೆ” ಪುಸ್ತಕವನ್ನು ಮೇಷ್ಟ್ರು ಓದಿ ನನ್ನ ಕೆಲಸ ಕುರಿತು ಮೇಷ್ಟ್ರು ಬರೆದ ಸುಧೀರ್ಘವಾದ ಪತ್ರ ನನಗೆ ಬಹುದೊಡ್ಡ ಪ್ರಶಸ್ತಿಯನ್ನು ತಂದುಕೊಟ್ಟಿತು.
ಕನ್ನಡ ನಾಡಿನ ವರನಟ ಡಾ. ರಾಜಕುಮಾರ್ ಅವರ ಕನ್ನಡವನ್ನು ಸವಿಯುವ ಸ್ಪಷ್ಟವಾದ ಕನ್ನಡತನದ ಮಾತು ಹಾಗೂ ಕನ್ನಡ ಭಾಷೆಗೆ ತಕ್ಕಂತೆ ಅವರು ನಟಿಸುವ ಶ್ರೇಷ್ಠ ಅಭಿನಯ ಕುರಿತು ಅಪಾರ ಪ್ರೀತಿಯನ್ನು ಹೊಂದಿದ್ದ ಮೇಷ್ಟ್ರು , ಡಾ. ರಾಜಕುಮಾರ್ ಅವರ ಕುರಿತು ಬರೆದ ಸಾಹಿತ್ಯ – ಅವರ ಕುರಿತು ಹಾಡಿದ ಮಾತುಗಳು ವಿಶಿಷ್ಟ ಭಿನ್ನತೆಯನ್ನು ಪಡೆದಿದ್ದವು.
ಕನ್ನಡ ನಾಡಿನ ವಿಶಾಲ ಜ್ಞಾನದ ಭಾಷಾ ವಿಜ್ಞಾನಿಯಾಗಿದ್ದ ಕೆವಿಎನ್ ಮೇಷ್ಟ್ರು ಕನ್ನಡ ಭಾಷಾ ವಿಶ್ವಕೋಶ – ಕನ್ನಡದ ಕೃಷಿ ಪದ್ದಕೋಶ –
ಅವರ ಸಮಗ್ರ ಬರಹಗಳನ್ನು ಸಂಗ್ರಹಿಸಿ ಅವರು ತಂದ
” ತುಂಡು ಮೇವು ” ” ಬೇರು-ಕಾಂಡ-ಚಿಗುರು ” ಸಂಪುಟಗಳು ಕನ್ನಡ ನಾಡಿನ ಭಾಷಾ ಶಾಸ್ತ್ರ ಹಾಗೂ ವೈಜ್ಞಾನಿಕ ಚಿಂತನೆಗೆ ಕೈಗನ್ನಡಿ ಆಗಿವೆ.
ಮೇಷ್ಟ್ರು ಅವರ ಸಾಹಿತ್ಯ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ , ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಹತ್ತಾರು ಸಂಘ-ಸಂಸ್ಥೆಗಳಿಂದ ಗೌರವ ಸನ್ಮಾನಗಳು ದೊರಕಿವೆ. ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಕೇಂದ್ರದ ಅಧ್ಯಕ್ಷರಾಗಿ ಆದರ್ಶ ದಾಯಕವಾಗಿ ಕಾರ್ಯನಿರ್ವಹಿಸಿದವರು ಮೇಷ್ಟ್ರು.
ದಲಿತ ಸಾಹಿತ್ಯ ಹಾಗೂ ದಲಿತ ಚಳುವಳಿಯ ಮೊದಲ ತಲೆಮಾರಿನ ಕೊಂಡಿ ಆಗಿರುವ ಪ್ರೊ. ಸಿದ್ದಲಿಂಗಯ್ಯ ನವರು ಎಂ ಎ ಪದವಿ ಅಧ್ಯಯನ ಮಾಡುವಾಗ ಕೆವಿಎನ್ ಮೇಷ್ಟ್ರು ಶಿಷ್ಯರು. 1974ರಲ್ಲಿ ಕವಿ ಸಿದ್ದಲಿಂಗಯ್ಯನವರ ಪ್ರಥಮ ಕವನ ಸಂಕಲನ
” ಹೊಲ ಮಾದಿಗರ ಹಾಡು ” ಪ್ರಕಟಗೊಳಿಸಿದ್ದೆ ಪ್ರೊ. ಕೆವಿಎನ್ ಅವರು . ದಲಿತ ಸಾಹಿತ್ಯ ಹಾಗೂ ದಲಿತ ಚಳುವಳಿ ಬಗ್ಗೆ ಮಹತ್ವದ ಮಾರ್ಗದರ್ಶಕರಾಗಿದ್ದ ಮೇಷ್ಟ್ರು ಆ ದಿಕ್ಕಿನಲ್ಲಿ ನಾನು ಮುನ್ನಡೆಯಲು ಪ್ರೇರಣೆಯಾದವರು.
ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದ ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ಹಾಗೂ ಒನಕೆ ಓಬವ್ವೆ ಅಧ್ಯಯನ ಕೇಂದ್ರದಿಂದ ನನ್ನ ಸಂಪಾದಕತ್ವ ಹಾಗೂ ರಚನೆಯಲ್ಲಿ ಪ್ರಕಟಗೊಂಡ ದುಡಿಯುವ ಜನರನ್ನು ಪ್ರತಿನಿಧಿಸುವ ಕೃತಿಗಳನ್ನು ನೋಡಿ ಅತೀವ ಸಂತಸದಿಂದ ಅವರು ನನ್ನೊಂದಿಗೆ ಸುಧೀರ್ಘವಾಗಿ ಫೋನ್ ನಲ್ಲಿ ಮಾತನಾಡಿ ಆಶೀರ್ವಾದ ಮಾಡಿದ್ದು ನಮ್ಮನ್ನು ಅಗಲಿರುವ ನನ್ನ ತಂದೆ ತಾಯಿಯವರನ್ನು ಜ್ಞಾಪಿಸಿತು. ಎರಡು ತಿಂಗಳ ಹಿಂದೆ ನಮ್ಮ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡಾಗ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯಲು ನಾನು ಅವರಿಗೆ ಫೋನ್ ಮಾಡಿ ಮಾತಾಡಿದ್ದೆ ನನ್ನ ಅವರ ಕಡೆಯ ಮಾತುಗಳು. ಪೂಜ್ಯರು ಅಂದು ನನ್ನಂಥ ಕಿರಿಯ ಸಹೋದರನಿಗೆ ಪ್ರೀತಿಯಿಂದ ಮಾಡಿದ ಆಶೀರ್ವಾದವನ್ನು ನಾನು ಜೀವನಪೂರ್ತಿ ಕಾಪಾಡಿಕೊಳ್ಳುತ್ತೇನೆ. ಮೇಷ್ಟ್ರು ಜೊತೆ ಕಳೆದ ಆತ್ಮೀಯವಾಗಿ ಕಳೆದ ನೆನಪುಗಳು ಚಿರಸ್ಥಾಯಿಯಾಗಿ ನಮ್ಮೊಳಗೆ ಉಳಿದಿದೆ. ಇವೆಲ್ಲವೂ ನಮ್ಮ ನಮ್ಮ ಇತಿಹಾಸದ ಭಾಗವೂ ಆಗಿಬಿಡುತ್ತದೆ. ಇಂತಹ ಇತಿಹಾಸವನ್ನು ಮರೆತರೆ ನಾವು ಮತ್ತೆ ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬ ಅಂಬೇಡ್ಕರ್ ಅವರ ಮಾತು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸತ್ಯವಾದದ್ದು.
ಪ್ರೀತಿಯ ಕೆವಿಎನ್ ಮೇಷ್ಟ್ರು ನಿಧನಕ್ಕೆ ಸಂತಾಪವನ್ನು ಸೂಚಿಸಿ – ಅವರ ಬದುಕು ಹಾಗೂ ಶೈಕ್ಷಣಿಕ ಹಿನ್ನೆಲೆ ಆದರ್ಶದಾಯಕ ಬದುಕನ್ನು ಗೌರವಿಸುತ್ತಾ ಪೂಜ್ಯರ ಆತ್ಮಕ್ಕೆ ಗೌರವ ಪೂರಕವಾಗಿ ಶಾಂತಿ ಕೋರುತ್ತೇನೆ.
🙏🌹 ❤️ 🌹 🙏

-ಡಾ. ಎನ್ ಚಿನ್ನಸ್ವಾಮಿ ಸೋಸಲೆ, ಹಿರಿಯ ಪ್ರಾಧ್ಯಾಪಕರು, ಹಂಪಿ ಕನ್ನಡ ವಿವಿ, ವಿದ್ಯಾರಣ್ಯ
