ನಾಳೆಯಿಂದ(ನ.14) ಎರಡು ದಿನಗಳ ಕಾಲ ಅಖಂಡ ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ: ಹಿರಿಯ ಪತ್ರಕರ್ತ ಸಿ. ಜಿ. ಹಂಪಣ್ಣ ಅವರಿಗೆ ಸರ್ವಾಧ್ಯಕ್ಷತೆಯ ಗೌರವ

ಬಳ್ಳಾರಿ. ನ. 13: ಅಖಂಡ ಬಳ್ಳಾರಿ ಜಿಲ್ಲಾ 23 ನೇ  ಕನ್ನಡ ಸಾಹಿತ್ಯ  ಸಮ್ಮೇಳನವನ್ನು  ಶನಿವಾರ ಮತ್ತು ಭಾನುವಾರ(ನ.14, 15)ದಂದು ನಗರದ ರಾಘವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.

ಹಿರಿಯ ಪತ್ರಕರ್ತ ಸಿ.ಜಿ. ಹಂಪಣ್ಣ

ಹಿರಿಯ ಪತ್ರಕರ್ತ, ಸಾಹಿತಿ 89ರ ಹರೆಯದ  ಸಿ.ಜಿ. ಹಂಪಣ್ಣ ಅವರು ಸರ್ವಾಧ್ಯಕ್ಷತೆಯನ್ನು  ವಹಿಸಲಿದ್ದಾರೆ. ಶನಿವಾರ ಮುಂಜಾನೆ 7:30ಕ್ಕೆ ಮಹಾನಗರ ಪಾಲಿಕೆ ಮೇಯರ್ ಪಿ ಗಾದೆಪ್ಪ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸುವರು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಿದಾನಂದಪ್ಪ ನಾಡಧ್ವಜಾರೋಹಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪನವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರು ಉಪಮಹಾಪೌರರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಕನ್ನಡ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಅವರು ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ನಗರದ ಕನ್ನಡಪರ ಹೋರಾಟಗಾರರು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರುಗಳು ಕಲಾವಿದರು ವಿವಿಧ ಸಂಘಟನೆಗಳ ಮುಖಂಡರುಗಳು  ಭಾಗವಹಿಸಲಿದ್ದಾರೆ. ಈ ಮೆರವಣಿಗೆಯು ಶ್ರೀ ದುರ್ಗಮ್ಮ ದೇವಸ್ಥಾನದಿಂದ ಆರಂಭಗೊಂಡು ಗಡಗಿ ಚೆನ್ನಪ್ಪ ಸರ್ಕಲ್ ಮೂಲಕ ರಾಘವ ಕಲಾಮಂದಿರವನ್ನು  ತಲುಪುವುದು.

ಸಮ್ಮೇಳನವನ್ನು ಹಂಪಿ  ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ ಪರಮಶಿವಮೂರ್ತಿ ಉದ್ಘಾಟಿಸುವರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ ವಹಿಸುವರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಕೊಟ್ಟೂರು ಸಂಸ್ಥಾನ ಮಠ ಬಳ್ಳಾರಿ,  ಕಮ್ಮರು ಚೇಡು ಮಠದ ಶ್ರೀ ಕಲ್ಯಾಣ ಸ್ವಾಮಿಗಳು ಹಾಗೂ ಆರ್ಚ್ ಬಿಷಪ್ ಡಿಸೋಜ ಅವರು ವಹಿಸಿಕೊಳ್ಳುವರು. ಸ್ಮರಣ ಸಂಚಿಕೆಯನ್ನು   ಸಂಸದರಾದ ಈ. ತುಕಾರಾಂ ಬಿಡುಗಡೆಗೊಳಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡುವರು.             ಮುಖ್ಯ ಅತಿಥಿಗಳಾಗಿ ಅಖಂಡ ಬಳ್ಳಾರಿ ಜಿಲ್ಲೆಯ ಎಲ್ಲಾ ಸಂಸದರು ಶಾಸಕರು ನಿಗಮ ಮಂಡಳಿ ಅಧ್ಯಕ್ಷರುಗಳು ವಿಧಾನ ಪರಿಷತ್ ಸದಸ್ಯರು ಪಾಲಿಕೆ ಮೇಯರ್ ಮತ್ತು ವಿವಿಧ ಸಮಿತಿಗಳ ಅಧ್ಯಕ್ಷರು,  ಮಾಜಿ ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್,  ಜಿಲ್ಲಾ ಪಂಚಾಯತ್ ಸಿಇಓ ಮಹಮ್ಮದ್ ಹಾರಿಸ್ ಸುಮೇರ್,  ಜಿಲ್ಲಾ  ಎಸ್ಪಿ  ಸುಮನ್ ಡಿ ಪನ್ನೇಕರ್, ವಿವಿಧ ಸಂಘ ಸಂಸ್ಥೆಯ ಮುಖಂಡರುಗಳು ಭಾಗವಹಿಸುವರು.

ಕವಿಗೋಷ್ಠಿ,  ವಿಚಾರಗೋಷ್ಠಿಗಳು ಜರುಗಲಿದ್ದು ಹೆಸರಾಂತ ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರರು ಸೇರಿದಂತೆ ಅನೇಕರು  ಭಾಗವಹಿಸಲಿದ್ದಾರೆ.  ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ಸಾಂಸ್ಕೃತಿಕ ವೇದಿಕೆ ಮತ್ತು ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ಸಾಹಿತ್ಯ ಸಾಧಕರಿಗೆ  ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.

ನ. 14ರ ಸಂಜೆ ಭಾನುವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಂಡೂರಿನ ಶ್ರೀ ಪ್ರಭು ಸ್ವಾಮಿಗಳು  ಮತ್ತು ಖಾಜಿ ಮಹಮದ್ ಸಿದ್ದಿಕಿ  ಸಾಹೇಬರು ಬಳ್ಳಾರಿ ಇವರುಗಳು ವಹಿಸಿಕೊಳ್ಳುವರು. ಕನ್ನಡ ವಿವಿಯ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಅವರು ಸಮರೋಪ ಭಾಷಣ ಮಾಡುವರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಬಿ.  ಶ್ರೀರಾಮುಲು,  ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ,  ರಾಘವ ಮೆಮೋರಿಯಲ್ ಅಧ್ಯಕ್ಷ ಕೋಟೇಶ್ವರರಾವ್ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ಖಾಸಗಿ ಶಾಲೆಯ ಮುಖ್ಯಸ್ಥರುಗಳು ಯೋಗ ಶಿಕ್ಷಕರು ವಿವಿಧ ಸಂಘಟನೆಯ ಅಧ್ಯಕ್ಷರು ಮತ್ತು ಮುಖಂಡರುಗಳು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *