ಬಳ್ಳಾರಿ ಎಂದರೆ ಬರೀ ಮೈನ್ಸ್ ಅಲ್ಲ, ಕಲೆಗಳ ತವರು: ಪ್ರಸಿದ್ಧ ಸಾಹಿತಿ ಡಾ.‌ಕುಂವೀ ಶ್ಲಾಘನೆ

ಡಾ. ಕುಂವೀ ಅವರಿಗೆ ‘ಕನ್ನಡ ಕಣ್ಮಣಿ’, ಪುರುಷೋತ್ತಮ ಹಂದ್ಯಾಳ್ ಅವರಿಗೆ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ಪ್ರದಾನ

ಬಳ್ಳಾರಿ, ನ.22:ಹಿರಿಯ ಸಾಹಿತಿ ಡಾ. ಕುಂ. ವೀರಭದ್ರಪ್ಪ (ಕುಂವೀ) ಅವರಿಗೆ ‘ಕನ್ನಡದ ಕಣ್ಮಣಿ’ ಹಾಗೂ ಹಿರಿಯ ರಂಗಕರ್ಮಿ ಪುರುಷೋತ್ತಮ ಹಂದ್ಯಾಳ್ ಅವರಿಗೆ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ನಗರದ ರೇಡಿಯೋ ಪಾರ್ಕ್ ಸಮೀಪದ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಆವರಣದಲ್ಲಿ ಶನಿವಾರ ಸಂಜೆ ‘ನಿಮಗಾಗಿ ನಾವು’ ಸಂಸ್ಥೆ ಆಯೋಜಿಸಿದ್ದ 6ನೇ ವರ್ಷದ ಕನ್ನಡ ಜಾತ್ರೆಯಲ್ಲಿ ಪದಾಧಿಕಾರಿಗಳು, ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.‌ಕುಂ. ವೀ ಅವರು, ಬಳ್ಳಾರಿ ಎಂದರೆ ಬರೀ ಮೈನ್ಸ್ ಅಲ್ಲ, ಕಲೆಗಳ ತವರು. ಇಲ್ಲಿ ಹಾಡುವ, ಕುಣಿಯುವ, ನಗಿಸುವ ಜನಗಳು ಇದ್ದಾರೆ. ಅಪ್ರತಿಮ ಕಲಾವಿದರ ಬೀಡು ಎಂದು ಶ್ಲಾಘಿಸಿದರು.
ನಾಡೋಜ ಬೆಳಗಲ್ಲು ವೀರಣ್ಣ, ನಾಡೋಜ ಸುಭದ್ರಮ್ಮ ಮನ್ಸೂರು, ಬಳ್ಳಾರಿ ರಾಘವ, ಡಾ. ಜೋಳದರಾಶಿ ದೊಡ್ಡನಗೌಡ, ಬಳ್ಳಾರಿ ಲಲಿತಮ್ಮ ಅವರು ರಂಗಭೂಮಿಗೆ, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು.
ರಂಗ ಕಲಾವಿದ, ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ್, ಯುವ ಕತೆಗಾರ ಪ್ರವೀಣ್ ಕುಮಾರ್ ಅವರು ತಮ್ಮ ಸಾಧನೆಗಳ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾವು ಕತೆ, ಕಾದಂಬರಿ ಬರೆಯಲು ಬಳ್ಳಾರಿ ಪರಿಸರ ಮತ್ತು ಆಂದ್ರದ ಗಡಿ ಗ್ರಾಮಗಳಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುವಾಗ ಕಂಡುಂಡ ಅನುಭವಗಳೇ ಪ್ರೇರಣೆ ಎಂದು ಹೇಳಿದರು.
ಬೆಳಿಗ್ಗೆ, ಮೇಯರ್ ಪಿ. ಗಾದೆಪ್ಪ ಅವರು ಕನ್ನಡ ಜಾತ್ರೆಯ ಧ್ವಜಾರೋಹಣ ನೆರವೇರಿಸಿ ವೇದಿಕೆ ಕಾರ್ಯಕ್ರಮವನ್ನೂ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಬಯಲಾಟ ಕಲಾವಿದೆ ಹರಿಜನ ಓಂಕಾರಮ್ಮ ಹಾಗೂ ಮಾಜಿ ಶಾಸಕ ಹರಗಿನದೋಣಿ ಸಣ್ಣ ಬಸವನಗೌಡ ಅವರ ವಂಶಸ್ಥರು ಮತ್ತು ಉದ್ಯಮಿ ಮಹಾರುದ್ರ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ದಿವಂಗತ ಗೋಡೆ ಶಿವರಾಜ್ ಅವರ ‘ನಂದನ ವನ’ ಕವನ ಸಂಕಲನವನ್ನು ಅವರ ಕುಟುಂಬಸ್ಥರು ಹಾಗೂ ಗಣ್ಯರು ಬಿಡುಗಡೆಗೊಳಿಸಿದರು.
ಸಮಾಜ ಸೇವಕರಾದ ಗೀತಾವೀರೇಶ್ ಅಧ್ಯಕ್ಷರು ಜೀವನ್ ಸಂಗೀತ ಮತ್ತು ಜೆ ಪಿ ಮಂಜುನಾಥ ರವರನ್ನು ಸನ್ಮಾನಿಸಲಾಯಿತು.
ಕನ್ನಡ ಜಾತ್ರೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕನ್ನಡ ನಾಡಗೀತೆ ಗಾಯನ, ಕನ್ನಡ ಹಾಡುಗಳ ಗಾಯನ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ರವಿಶಂಕರ ಗುರೂಜಿ, ಪಿ.ಎಂ ಕಾರ್ಯನಿರ್ವಾಹಕ ಅಭಿಯಂತರ ರಾಮಾಂಜಿನೇಯಲು,
ವೈದ್ಯರಾದ ಡಾ. ದ್ರಾಕ್ಷಯಣಿ, ಕನ್ನಡ ಪರ ಹೋರಾಟಗಾರ ಸಿದ್ಮಲ್ ಮಂಜುನಾಥ್, ಜಾನಪದ ಗಾಯಕ ಯಲ್ಲನಗೌಡ ಶಂಕರಬಂಡೆ, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರಾಚಾರ್ಯರಾದ ದಿಲೀಪ್ ಕಾಂಬ್ಳೆ, ಆಧ್ಯಾತ್ಮ ಚಿಂತಕಶಿವಶಂಕರಯ್ಯ, ರೈತ ಹೋರಾಟಗಾರ ಶರಣಬಸಪ್ಪ, ನಿರಂಜನ.ಪಿ.ಎಂ ಇಂಜಿನಿಯರ್ ಹಾಗೂ ಸಿನಿಮಾ ನಟ-ನಿರ್ದೇಶಕ ಷಣ್ಮುಖ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹತ್ತನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ವಿನಯ್ ಕುಮಾರ್, ಕಾರ್ಯದರ್ಶಿ ಬಿ. ಮಾರುತಿ ‘ಕನ್ನಡದ ಕೂಸು’ ಪ್ರಶಸ್ತಿ ನೀಡಿ ಗೌರವಿಸಿದರು.
ಕನ್ನಡ ನಾಡು-ನುಡಿ, ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಮಹತ್ವ ಸಾರುವ ಮೂಲಕ ಕನ್ನಡಾಭಿಮಾನವನ್ನು ಹೆಚ್ಚಿಸುವ ಉದ್ದೇಶದಿಂದ ಕನ್ನಡ ಜಾತ್ರೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ನಿರೂಪಣೆಯನ್ನು ಅಧ್ಯಾಪಕಿ ವೀಣಾ,ಶಾರದ, ಮಂಜುನಾಥ ಎಸ್ ಕೋಟಿ ನೆರವೇರಿಸಿದರು.

Leave a Reply

Your email address will not be published. Required fields are marked *