ಬೆಲೆ ಕಟ್ಟಲಾಗದು ಬೆವರಿಗೆ
ಬೆಲೆ ಕಟ್ಟಲಾಗದು ಬೆವರಿಗೆ
ಹೆಣ್ಣು ಮರೆಯಲಾಗದು ತವರಿಗೆ
ಋಣವ ತೀರಿಸಲಾಗದು ಹುಟ್ಟಿದೂರಿಗೆ.
ಆಶ್ರಯ ನೀಡುವುದು ಮಾಳಿಗೆ
ಬೆಳದಿಂಗಳ ತಂಪು ತಂತು ಬಾಳಿಗೆ
ಬಡಿದಾಡದಿರು ತಮ್ಮ ಹೊಟ್ಟೆ ಕೂಳಿಗೆ.
ತೂತು ಬಿದ್ದರೂ ತಲೆಯ ಸೂರಿಗೆ
ಉಪ್ಪಿಲ್ಲದಿದ್ದರು ಚಿಂತೆಯಿಲ್ಲ ಸಾರಿಗೆ
ಉಪಕಾರಿಯಾಗು ನೀ ಹುಟ್ಟಿದೂರಿಗೆ.
ಜ್ವರ ಬಂದರೆ ಎತ್ತಿಗೆ
ಬರೆ ಹಾಕುವುದೇಕೆ ಎಮ್ಮೆಗೆ
ದುಡಿದು ದಣಿದರೂ ಕಿಮ್ಮತ್ತಿಲ್ಲ ಕತ್ತೆಗೆ.
ಹೆಂಡ ಕುಡಿಸದಿರು ಕೋತಿಗೆ
ಬಣ್ಣ ಬಳಿಯದಿರು ಮಾತು ಮಾತಿಗೆ
ಬರವೇ ಬಾರದಿರಲಿ ಹೃದಯದ ಪ್ರೀತಿಗೆ.
ಮಿಥ್ಯ ನುಡಿಯದಿರಲಿ ನಾಲಿಗೆ
ಹುಳಿ ಬೆರೆಸದಿರು ಕುಡಿವ ಹಾಲಿಗೆ
ಪಂಚಾಮೃತ ಬಂದದ್ದು ತನ್ನ ಪಾಲಿಗೆ.
-ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಮುದ್ನಾಳ, ಯಾದಗಿರಿ ಜಿಲ್ಲೆ