ನನ್ನ ಬುದ್ಧ…
ಒಂದು ಧ್ಯಾನದ ನಡುವೆ
ಬುದ್ಧ ಎದೆಗೆ ಜೋತು ಬೀಳುತ್ತಾನೆ
ಸಮಾಧಾನಕ್ಕೂ ನೆಮ್ಮದಿಗೂ ಅವನು
ಸದಾ ಜೊತೆ ನಿಲ್ಲೋ ಜೊತೆಗಾರ….
ನಾವು ನಮ್ಮನ್ನೆ ಮರೆತು
ಸದಾ ನಮಗಾಗಿ ಮಿಡಿಯುವವರೊಂದಿಗೆ
ಹೇಗಿರಬೇಕೆಂದು ಬುದ್ಧ ಕಲಿಸುತ್ತಾನೆ…
ಅವನು ಪ್ರೀತಿಯನ್ನು ಮತ್ತಷ್ಟು ವಿಸ್ತರಿಸಿದ
ತಥಾಗತನೆಂಬುದು ಜಗಜ್ಜಾಹೀರು ವಿಚಾರ
ಸಂಕುಚಿತ ಮನಸಿನ ಜನರ ನಡುವೆ
ವಿಕಸಿತ ಬುದ್ಧಿಯ ಕಲಿಯುವುದ
ಕಲಿಸುವ ಜಾದುಗಾರ ನನ್ನ ಬುದ್ಧ…
ನಾವು ಸದಾ ಬಂಧಿಗಳು
ಸಂಸಾರ ಮಕ್ಕಳು ಮರಿಗಳು
ತಂದೆ-ತಾಯಿ, ಬಂಧು ಬಳಗ
ಹೀಗೆ ಹೆಗ್ಗಿಲ್ಲದೆ ತರಾತುರಿಯಲ್ಲಿ ಸಾಗುವಾಗ
ಎದುರುಗೊಳ್ಳುವ ಬುದ್ಧ
ನೆಮ್ಮದಿಯನ್ನು ನೀಡಿ ಮುಂದೆ ಸಾಗುತ್ತಾನೆ…
ಎಂತದ್ದೆ ಜಂಜಾಟಗಳಿದ್ದಾಗ್ಯೂ
ಅವನು ತೀರ ಸಮೀಪದಲ್ಲಿ ಇರುವಾಗ
ನೋವು ತೇಯ್ದು ಹೋಗುತ್ತದೆ
ಅವನ ವಿಗ್ರಹದ ಮುಂದೆ ನಿಂತು
ಸಮಸ್ಥಿತಿಯಲ್ಲಿ ಧ್ಯಾನಿಸಿ ಬಿಡಿ
ನಿಮಗಾವ ಜೋತಿಷಿಯು ಭವಿಷ್ಯ ಹೇಳಿ
ಭರಪೂರ ನೆಮ್ಮದಿ ಕೊಡಲಾರ
ಆದರೆ ನನ್ನ ಬುದ್ಧ ಮೌನವಾಗಿ ನೆಮ್ಮದಿ ಕೊಡಬಲ್ಲ…
-ಸಿದ್ದು ಜನ್ನೂರ್, ಚಾಮರಾಜ ನಗರ