ಅನುದಿನ ಕವನ-೧೬೦೨, ಕವಿ: ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ:ಕಾದಿಹಳು ಶಾಕುಂತಲೆ…

ಕಾದಿಹಳು ಶಾಕುಂತಲೆ…

ಎನಿತು ಕನಸುಗಳ ಸಂಗಮವೋ
ಎನಿತು ಕಾತುರತೆಯ ನಿರೀಕ್ಷೆಯೋ
ಮಾಸಗಳುರುಳಿದೆ ನೀನೆಂದು ಬರುವೆಯೋ..

ಭಾವಗಳರಳಿ ಬಳ್ಳಿಯಲಿ ತೊನೆದಾಡಿದೆ
ಪ್ರೀತಿಯರಳಿ ಮನದಲಿ ತೋಯ್ದಾಡಿದೆ
ವಸಂತ ಮರಳಿದೆ ನೀನೆಂದು ಬರುವೆಯೋ..

ಕಾಳಿದಾಸನ ಮೇಘ ಸಂದೇಶ ತಲುಪಲಿಲ್ಲವೇ
ನನ್ನ ಮನದಾಳದ ಪ್ರೀತಿಯೋಲೆ ಕಾಣಲಿಲ್ಲವೇ
ಹೂಮಾಲೆ ಕಾದಿದೆ ನೀನೆಂದು ಬರುವೆಯೋ..

ಮತ್ಸ್ಯನುಂಗಿದ ಪ್ರೇಮದುಂಗರ ನಿನಗಿತ್ತರೂ
ನೆನಪಿನಂಗಳದ ಮಧುರ ಘಳಿಗೆಗಳ ಕಾಣದೆ
ನೀ ಮರೆತಂತಿರುವೆ.. ಮತ್ತೆಂದು ಬರುವೆಯೋ..

ಕಾದಿರುವ ಜೀವಕೆ ಮತ್ತೆ ಪರೀಕ್ಷೆಯೊಡ್ಡದಂತೆ
ನೀನ್ನಲೇ ಜೀವವ ಮೇಳೈಸಿರುವ ನನ್ನುಸಿರನು
ವಿರಹದಗ್ನಿಕುಂಡಕೆ ದೂಡದಂತೆ ಬಂದುಬಿಡು..

ಯಾರಿಗೋ ಹೂಡಿದ ಬಾಣ ಈ ಶಕುಂತಲೆಯ
ಪ್ರೇಮದೆದೆಯ ಛಿದ್ರವಾಗಿಸದಂತೆ ಬಂದುಬಿಡು..

-ಎಂ.ಆರ್. ಸತೀಶ್.. ಕೋಲಾರ