ಅನುದಿನ‌ ಕವನ-೧೬೨೧, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಪರಾಭವ

ಪರಾಭವ!?

ನಿನ್ನ ಕೈ ಬೆರಳುಗಳಲ್ಲಿ ನನ್ನ ಬೆರಳುಗಳ ಬೆಸೆಯೋಣ ಎಂದುಕೊಂಡೆ..
ನನ್ನ ಕೈ ನಿನ್ನ ಸೋಕುವ ಮುನ್ನ ಬೇರೊಂದು ಕೈ ಬೆರಳುಗಳು ನಿನ್ನ ಬೆರಳುಗಳೊಂದಿಗೆ ಹೆಣೆದಿದ್ದವು.!

ನಿನ್ನ ಭಾವನೆಗಳಿಗೆ ನನ್ನ ಭಾವನೆಗಳ ಬೆಸೆಯೋಣ ಎಂದುಕೊಂಡೆ..
ನಾ ಭಾವನೆಗಳ ವ್ಯಕ್ತಪಡಿಸುವಷ್ಟರಲ್ಲಿ ನಿನ್ನಲ್ಲಿ ಭಾವನೆಗಳೇ ಮಡಿದಿದ್ದವು..!

ನಿನ್ನ ಉಸಿರಿಗೆ ನನ್ನ ಉಸಿರು ಸೇರಿಸಬೇಕೆಂದುಕೊಂಡೆ..
ನನ್ನ ಉಸಿರೇ ನಿಂತು ಹೋಗುವಂತೆ ಬೇರೊಂದು ಉಸಿರು ನಿನ್ನ ಸೇರಿ ನಾ ಜೀವವಿದ್ದು ನಿರ್ಜೀವ ಗೊಂಬೆಯಂತಾಗಿದ್ದೆ..!

ವಾಸ್ತವಕೆ ನೀ ದೂರ..
ಕನಸು ಕಲ್ಪನೆಗೆ ನೀನೆಂದೂ ಹತ್ತಿರ.
ಕದಿಯಲಾರರು ಯಾರೂ ಕಲ್ಪನೆ ಕನಸುಗಳ..
ಅದಕಾಗಿಯೇ ಸವಿಯುವೆ ನಾ ನೆನಪಿನಾಳದಲಿ ಒಮ್ಮೊಮ್ಮೆ ನಿನ್ನೊಲವ ರಸಗವಳ!!

ಅಮರ ಮಧುರ ಪ್ರೀತಿಗೆ..
ನಮ್ಮ ಪ್ರೀತಿಯಾಯ್ತು ನಿದರ್ಶನ…
ಕೋರುವೆ ನಿನ್ನಲ್ಲಿ ಮಾಡದಿರು ಪ್ರೀತಿಗಾಗಿ ಈಗ ವ್ಯರ್ಥ ನಿರಶನ!!
ದೇಹಾತೀತ ಆರಾಧನೆಯ ಪ್ರೀತಿಗೆ ಇಂದಿಗೂ ರಾಧಾಮಾಧವ ನಿದರ್ಶನ ಚಿರಂತನ!!

ಇಂತಿ ನಿನ್ನ ನಾನ್ಯಾರು!!?


-ಶಾಂತಾ ಪಾಟೀಲ್, ಸಿಂಧನೂರು
—–

Leave a Reply

Your email address will not be published. Required fields are marked *