ಅನುದಿನ ಕವನ-೧೬೩೬, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ನಿನ್ನ ನಗುವೆ ಅಮೃತ

ನಿನ್ನ ನಗುವೆ ಅಮೃತ

ನಿನ್ನ ನಂಬಿದಷ್ಟು
ಮತ್ತಾರನ್ನೂ ನಂಬಲಿಲ್ಲ!
ನನ್ನನ್ನೂ ಗಮನಿಸಿಕೊಳ್ಳಲಿಲ್ಲ!
ಅದಕ್ಕೆಂದೇ
ನಿನ್ನ ಸುಳ್ಳುಗಳೆಲ್ಲ ಆಕರ್ಷಕ!
ನಿನ್ನ ತಿರಸ್ಕಾರವೂ ಮನಮೋಹಕ!!

ದೂರವಾದದ್ದು ನೋವಲ್ಲ
ಜೊತೆಯಿದ್ದಾಗ ಒಂದು ಸುಳಿವು ಹತ್ತಲಿಲ್ಲ
ನೀ ಮನ ಮುರಿಯುವುದು!
ಈಗ ನೋಡಿ
ಮುಗಳ್ನಗುವಿಯಲ್ಲ ಅದೇ ಕಣ್ಣಿಗೆ ಮುಳ್ಳಿರಿದಂತೆ!
ಹೃದಯಕ್ಕೆ ಕಾದ ಕಬ್ಬಿಣ ಬಡಿದಂತೆ!

ನಿನ್ನ ನಗು ಮಿಂಚು
ಅದರ ನಂತರ ಬರುವ ಗುಡುಗು ತಿಳಿಯಲಿಲ್ಲ!
ಬಂದೆರಗಿದ ಸಿಡಿಲು ಅರಿಯಲಿಲ್ಲ!
ಮರೆವೆಗೊಂಡು ಬಿದ್ದಾಗಲು ಸುಖ!
ನಿನ್ನ ನಗುವೆ ಅಮೃತ ಜಳಕ!


-ಟಿ ಪಿ ಉಮೇಶ್, ಹೊಳಲ್ಕೆರೆ