ಅಮ್ಮಳಾಗುವುದೆಂದರೆ…
ಹಾಳೆಗಳ ತಿರುವು ಹಾಕುತ್ತಿದ್ದ ಕೈಗಳೀಗ
ಇಷ್ಟದ ಕಥೆಯ ಅರ್ಧಕ್ಕೆ ಮುಂದೂಡಲು
ಪುಸ್ತಕಗಳ ನಡುವೆ ಗುರುತಿಗಾಗಿ ಇಟ್ಟ
ಹಾಳೆಯ ತುಂಡಿನಂತೆ ವಿರಮಿಸುತ್ತಿವೆ
ಹೇಳದ ಕೇಳದ ಅಧ್ಯಾಯಕ್ಕಾಗಿ ಕಾಯುತ್ತಾ…
ಚಂದ್ರನ ಹೊಳಪಿನಲ್ಲಿ ಮಿಂಚು ಹುಳುವಿನ
ಬೆಳಕ ಕಾಣುವ ರೂಪಕಗಳ ಹೆಣೆಯುತ್ತಿದ್ದ
ಮೆದುಳು ಈಗ ಕುದಿವ ಮುದ್ದೆ ಪಾತ್ರೆಯಲ್ಲಿ
ಚೆಂದದ ರುಚಿಯ ಸಾಧ್ಯತೆಯನ್ನು ಹುಡುಕುತ್ತಿದೆ
ಕವಿತೆಗಳ ಸಾಲು ಜೋಗುಳಗಳಾಗಿ ಬದಲಾಗಿವೆ
ಅವು ಎದೆಯಾಳದ ಮಿಡಿತದ ಪ್ರತಿಧ್ವನಿಯಾಗಿವೆ.
ಲೇಖನಿ ಕಾಯುತ್ತಿದ್ದೆ ತೂಕಡಿಸುವ ಜೋಲಿಯಂತೆ
ನನ್ನ ತೋಳುಗಳೇ ಸಾವಿರ ಕನಸುಗಳ ತೊಟ್ಟಿಲಾಗಿವೆ
ಮುಚ್ಚಿದ ರೆಪ್ಪೆಗಳ ಹಿಂದಿನ ಕಣ್ಣ ಗುಡ್ಡೆಗಳಂತೆ
ನನ್ನೊಳಗಿನ ಆಲೋಚನೆಗಳು ಜಗವ ನೋಡಲು,
ಅದರೊಳಗೆ ರೆಕ್ಕೆ ಕೆದರಿ ಹಾರಲು ಕಾದಿವೆ
ಆದರೆ ನಾನಗೀಗ ಹಾಲಿನ ಬಾಟಲಿ, ಮತ್ತು
ಕಂದನ ಆಟ ಪಾಠಗಳನ್ನೇ ಹಗಲಿರುಳಿನ
ಬೆಚ್ಚಗಿನ ರೂಪಕಗಳಾಗಿಸಿಕೊಂಡಿರುವೆ
ಅಮ್ಮಳಾಗುವುದೆಂದರೆ …
ಮುಚ್ಚಿಟ್ಟ ಪುಸ್ತಕದೊಳಗಿನ ಮೌನವಂತೂ ಅಲ್ಲ
ಬರೆಯದೇ ಉಳಿದ ಮೊಗದ ಮೇಲೇ ಉಳಿದ
ನಿದ್ರೆಯಿಲ್ಲದ ರಾತ್ರಿಗಳ ಲಯವಾದ ಕವಿತೆ
-ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು
—–
ಚನ್ನಾಗಿದೆ