ಬಳ್ಳಾರಿ, ಜು.3: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25 ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಯುಜಿಸಿ- ನಾನ್ ಯುಜಿಸಿ ಅತಿಥಿ ಉಪನ್ಯಾಸಕರನ್ನು ತಾರತಮ್ಯ ಮಾಡದೇ ಮುಂದುವರೆಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಟಿ. ದುರ್ಗಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024- 25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಯಥಾಸ್ಥಿತಿ ಆಯಾ ಕಾಲೇಜುಗಳಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿ ಜು. 10 ರಂದು ಬೆಂಗಳೂರು ಮತ್ತು ಗದಗ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ಹಾಗೂ ಗದಗಿನ ಕಾನೂನು ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿ ಸರಕಾರವನ್ನು ಎಚ್ಚರಿಸಲಾಗುವುದು. ಇದಕ್ಕೂ ಮಣಿಯದಿದ್ದರೆ ಹೋರಾಟವನ್ನು ತೀವ್ರಗೊಳಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿತ್ತು. ಆದರೆ ಸರ್ಕಾರ ಈ ಅಂಶವನ್ನೇ ಮರೆತು ಹತ್ತಾರು ವರ್ಷಗಳ ಸೇವಾ ಅನುಭವವಿರುವ ಅತಿಥಿ ಉಪನ್ಯಾಸಕರಿಗೆ ಮರಣ ಶಾಸನವಾಗುವಂತಹ ಜೂ. 25ರಂದು ಅಧಿಸೂಚನೆಯನ್ನು ಹೊರಡಿಸಿದೆ. ಕೂಡಲೇ ಅತಿಥಿ ಉಪನ್ಯಾಸಕರಿಗೆ ಮಾರಕವಾಗಿರುವ ಈ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಡಾ. ದುರ್ಗಪ್ಪ ಸರಕಾರವನ್ನು ಒತ್ತಾಯಿಸಿದರು.
ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ವಯೋ ನಿವೃತ್ತಿ ಅಂಚಿನಲ್ಲಿದ್ದಾರೆ. ಇವರಿಗೆ 15 ಲಕ್ಷ ರೂಪಾಯಿಗಳ ಇಡುಗಂಟನ್ನು ಹಾಗೂ ಸೇವಾ ಭದ್ರತೆಯನ್ನು ನೀಡಬೇಕು. ರಾಜ್ಯದ ಅಕ್ಕಪಕ್ಕದ ರಾಜ್ಯಗಳಲ್ಲಿರುವಂತೆ ಅತಿಥಿ ಉಪನ್ಯಾಸಕರ ವಯೋಮಿತಿಯನ್ನು 60ರಿಂದ 65 ವರ್ಷಕ್ಕೆ ಹೆಚ್ಚಳ ಮಾಡಬೇಕು. 67 ಸಾವಿರ ರೂಪಾಯಿಗಳವರೆಗೆ ವೇತನವನ್ನು ನಿಗದಿಪಡಿಸಬೇಕು ಮತ್ತು ಆರೋಗ್ಯ ವಿಮೆ, ಜೀವವಿಮೆ ಪ್ರಾವಿಡೆಂಟ್ ಫಂಡ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಯುಜಿಸಿ ಮತ್ತು ನಾನ್ ಯು ಜಿ ಸಿ ಎಂಬ ತಾರತಮ್ಯವನ್ನು ಬಿಟ್ಟು, ಉಚ್ಚ ನ್ಯಾಯಾಲಯದ ಧಾರವಾಡ ವಿಭಾಗೀಯ ಪೀಠ ಹತ್ತು ವರ್ಷಗಳ ಕಾಲ ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವ ಉಪನ್ಯಾಸಕರನ್ನು ಕಾಯಂ ಗೊಳಿಸಲು ಆದೇಶಿದಂತೆ ಅನುಷ್ಠಾನ ಗೊಳಿಸಬೇಕು. ಹಿಂಬರಹ ನೀಡಿ ಜಾರಿಕೊಳ್ಳುವುದು ಸರಿಯಲ್ಲ ಎಂದರು.
ಯು ಜಿ ಸಿ-ನಾನ್ ಯು ಜಿ ಸಿ ಎಂದು ತಾರತಮ್ಯ ಮಾಡಿ ಅತಿಥಿ ಉಪನ್ಯಾಸಕರನ್ನು ಬೀದಿಗೆ ತಳ್ಳುವ ಕೆಲಸಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿದರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೇವಲ 33 ಜನ ಖಾಯಂ ಹಾಗೂ 110 ಅತಿಥಿ ಉಪನ್ಯಾಸಕರಿದ್ದಾರೆ. ಆದಾಗ್ಯೂ ಸ್ವಾಯತ್ತ ಕಾಲೇಜುಗಳಲ್ಲಿ ರಾಷ್ಟ್ರಮಟ್ಟದಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಇದಕ್ಕೆ ಅತಿಥಿ ಉಪನ್ಯಾಸಕರ ಶ್ರಮವೂ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಹೇಳಿದರು.
ಅತಿಥಿ ಉಪನ್ಯಾಸಕರನ್ನು ಪದೇಪದೇ ಕೌನ್ಸಲಿಂಗ್ ನೆಪದಲ್ಲಿ ಮಾನಸಿಕವಾಗಿ ಹಿಂಸಿಸುವ ಕಾಲೇಜು ಶಿಕ್ಷಣ ಇಲಾಖೆಯ ಕ್ರಮ ಸರಿಯಲ್ಲ. ಅತಿಥಿ ಉಪನ್ಯಾಸಕರ ಕುರಿತು ಸರಕಾರಕ್ಕೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇವರ ಮೂಲ ಮಾತೃ ಇಲಾಖೆಗಳಿಗೆ ಕಳುಹಿಸಿ ಕೊಡಬೇಕೆಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಿ. ಸಿದ್ದೇಶ್, ಸಹ ಕಾರ್ಯದರ್ಶಿ ಟಿ.ರುದ್ರಮುನಿ, ಎಂ. ರಫಿ, ಟಿ. ಜಯರಾಮ್, ಬೋಯ ಸಂಧ್ಯಾ, ರಾಜಲಕ್ಷ್ಮಿ, ಶುಭ ಜ್ಯೋತಿ, ಗುರುರಾಜ್, ಎಸ್.ಎಂ. ರಮೇಶ್, ರಾಮಣ್ಣ, ಶರಣಪ್ಪ, ವೈ. ಎರ್ರಿಸ್ವಾಮಿ, ಶಿವಕುಮಾರ್ ಅಂಗಡಿ ಸೇರಿದಂತೆ ಇತರರಿದ್ದರು.
—–