ಗಜ಼ಲ್
ಯಾವುದೋ ಅಲೆಯೊಂದು ಹರಿದಿದೆ ನಮ್ಮ ನಡುವೆ
ಯಾವುದೋ ಕಲೆಯೊಂದು ಉಳಿದಿದೆ ನಮ್ಮ ನಡುವೆ
ಸಂಜೆ ಹೂಗಳ ಗಂಧ ಹಾಯುವ ದೂರವೆಷ್ಟೋ?
ಎದೆಗೆ ಕಚಗುಳಿಯಿಟ್ಟ ಚಿಟ್ಟೆ ಹಾರುತ್ತಿದೆ ನಮ್ಮ ನಡುವೆ
ಕಣ್ಣು ಕೂಡಿದ ಘಳಿಗೆಗೆ ಪಾರಿಜಾತವೇ ಅರಳಿತಂತೆ
ಹೂ ಉದುರಿಸಿಕೊಂಡ ಹಾದಿಯೊಂದಿದೆ ನಮ್ಮ ನಡುವೆ
ಕಾರಣಗಳ ಕೆದಕಲಾರೆ ಸರಿದು ಹೋದೆಯೆಂದು
ಮೀರಿಕೊಳ್ಳುವ ಘನತೆಯೊಂದಿದೆ ನಮ್ಮ ನಡುವೆ
ನೀನಿಲ್ಲದ ಬದುಕಲಿ ಬೆಳಕೇ ಇಲ್ಲವೆನ್ನುತ್ತಾರೆ ‘ಪ್ರಾಣವೇ’
ಕತ್ತಲನೇ ಆತುಕೊಳ್ಳುವ ಬೆರಗೊಂದಿದೆ ನಮ್ಮ ನಡುವೆ
-ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ