ಅನುದಿನ ಕವನ-೧೬೫೧, ಕವಯತ್ರಿ: ಸಂಘಮಿತ್ರೆ ನಾಗರಘಟ್ಡ, ಬೆಂಗಳೂರು, ಕವನದ ಶೀರ್ಷಿಕೆ:ನೆತ್ತರಿನ ಎದೆಯಲ್ಲೊಂದು ಪ್ರೇಮಗೀತೆ

ನೆತ್ತರಿನ ಎದೆಯಲ್ಲೊಂದು ಪ್ರೇಮಗೀತೆ

ನಾ ನಿನ್ನನ್ನು ಹೇಗೆ ಪ್ರೀತಿಸುತ್ತೇನೆಂದರೆ
ಗುಟ್ಟಿನ ಸಮಯದಲ್ಲಿ ಗುನುಗುವ
ಪಿಸುಮಾತಿನಂತಲ್ಲ, ಕತ್ತಲೆಯ
ಹೊರತಾಗಿಯೂ ಉರಿಯುವ
ಬೀದಿ ದೀಪದಂತೆ

ಬಂಡಾಯದ ವಾಕ್ಯಗಳ ನಡುವೆಯೂ
ನಿನ್ನ ಹೆಸರೇ ಬೇರೂರಿದೆ ನಿನ್ನ
ಪ್ರತೀ ಅಪ್ಪುಗೆಯೂ ಸಂಸತ್ತಿನಲ್ಲಿ
ಮರೆಯಾದ ಘೋಷಣೆಗಳಂತಿವೆ.

ನಾ ನಿನ್ನನ್ನು ನನ್ನ ಸೀರೆಗೆ ನೇಯ್ದು
ನೆರಿಗೆಗಳ ಮಧ್ಯೆ ಸಿಗಿಸಿಕೊಂಡಿರುವೆ
ಈಗಾಗಲೇ ಅಂಬೇಡ್ಕರ್, ಮಾರ್ಕ್ಸ್
ಮತ್ತು ಕುದಿವ ಬೇಗೆಯಲ್ಲಿ ಬೆಂದ
ನನ್ನವ್ವನ ಪ್ರೀತಿ ಆವಿಯಾಗುತ್ತಿದೆ.

ಇಷ್ಟಾದರೂ ಅವರು ಪ್ರೀತಿ
ರಾಜಕಾರಣವಲ್ಲ ಎಂದೇ ವಾದಿಸುತ್ತಾರೆ.
ಹಾಗಿದ್ದ ಮೇಲೆ ನೀಲಿ ಬಾವುಟವನ್ನು
ಇಷ್ಟ ಪಟ್ಟ ನನ್ನ ಹೃದಯ ಇದ್ದಕ್ಕಿದ್ದಂತೆ
ಗುಲಾಬಿಗೆ ಮಿಡಿದಿದ್ದೇಕೆ?

ನನಗೀಗ ಒದ್ದೆಯಾದ ನನ್ನವರ
ಕಣ್ಣಾಲಿಗಳು ಭಾಷೆ ಬಾರದ
ಗಡಿಗಳಲ್ಲಿ ಕಣ್ಣರಳಿಸಿ ಕುಳಿತ
ಮಕ್ಕಳಂತೆ ಕಾಣುತ್ತವೆ.

ನನ್ನವನೇ, ಒಮ್ಮೆ ಇಲ್ಲಿ ಕೇಳು
ನನ್ನ ಬೆನ್ನು ಮೂಳೆ ನೀನಂದುಕೊಂಡಂತೆ
ಮೌನ ತಾಳುವಷ್ಟು ಮೆದುವಾಗಿಲ್ಲ.
ನನ್ನ ಜನರ ಒಲವಿಗೆ ಬಾಗಿದರೆ
ನನ್ನ ಮೇಲ್ಲೊಂದು ಊರುಕೇರಿಯನ್ನೇ
ಕಟ್ಟಿಬಿಡಲು ತುದಿಗಾಲಿನಲ್ಲಿದ್ದಾರೆ.

ಅದಕ್ಕೆ ನಾನೀಗಲೂ
ಕೈಗಳಲ್ಲಿ ಅಸ್ಪೃಶ್ಯತೆಯ ನೆತ್ತರ
ಶಾಯಿ ಹಿಡಿದು ಜೊತೆಗೊಂದು
ಪ್ರಸ್ತಾವನೆಯ ಜಪದ ಚೀಟಿಯಂತೆ
ಮಡಚಿ ಕಿಸೆಯಲ್ಲೇ ಇರಿಸಿಕೊಂಡರೂ
ನಿನ್ನಸೆರ ಹಚ್ಚೆಯ ಎದೆಯನ್ನೇ
ಬಿರುಸು ಗಾಳಿಗೆ ಒಡ್ಡಿ ನಿಂತಿದ್ದೇನೆ..

ನನಗಿದು ಬರಿ ಕವಿತೆಯಲ್ಲ
ಮಾಸದ ಗಾಯದ ಹಾಡು…
ಭರವಸೆಯ ಹಸಿವಿನ ಬಂಧನ,
ಒಮ್ಮೆ ಕೈ ಚಾಚಿ ನಿಂತ ಕೈಗಳಲ್ಲಿ
ತಯಾರಾದ ಕೌದಿಯಂತೆ..

ಸಾಧ್ಯವಾದರೆ ಗಾಜಾ಼ದ ಜನರು
ಇದನ್ನು ಓದಲಿ, ಅವರಿಗೂ
ತಿಳಿಯಲಿ ನಾವಿಬ್ಬರೂ ಬಾಂಬು
ಹಿಡಿದು ನಿಂತವನ ಬೂಟಿನಲ್ಲಿ
ಪ್ರತೀ ಹಾಳೆಯಲ್ಲೂ ಬಿಡುಗಡೆಯ
ಗೀತೆಯ ಕನವರಿಸುವ ಎರಡೂ
ನಿಷೇಧಿತ ಪುಸ್ತಕಗಳಂತೆ
ಪ್ರೀತಿಸುತ್ತಿದ್ದೇವೆಂದು..

ತೂಕದ ಬಂದೂಕುಗಳ ಹೊತ್ತು
ನಿಂತ ಅವರ ಹೆಗಲುಗಳೂ
ಮುದ್ದು ನಗೆಯ ಬೀರುವ
ಮಗುವಿನ ಬಾರವ ಹೊರಲಿ…


-ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು
—–