ರಾಷ್ಟ್ರೀಯ ಸಂಶೋಧನಾ ವಿಚಾರ ಸಮ್ಮೇಳನಕ್ಕೆ ಚಾಲನೆ: ಬಹುತ್ವವನ್ನು ಗೌರವಿಸಿದಾಗ ಕನ್ನಡ ಸಂಸ್ಕೃತಿ ಉಳಿಯುವುದು -ಜಾನಪದ ವಿದ್ವಾಂಸ. ಪ್ರೊ. ಹಿ.ಚಿ.ಬೋರಲಿಂಗಯ್ಯ

ಶಂಕರ ಘಟ್ಟ (ಕುವೆಂಪು ವಿವಿ), ಜು.8:  ಎಪ್ಪತ್ತರ ದಶಕದಲ್ಲಿದ್ದ ವಾಗ್ವಾದಗಳು ಇಂದು ಕುಂಠಿತಗೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದ ಪುನರ್ ಮನನ ಅತಿಅಗತ್ಯವಾಗಿದೆ. ಬಹುತ್ವವನ್ನು ಗೌರವಿಸಿದಾಗ ಮಾತ್ರ ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವೆಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಜಾನಪದ ವಿದ್ವಾಂಸ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ನುಡಿಲೋಕ ಸಭಾಂಗಣದಲ್ಲಿ ಮಂಗಳವಾರ ಕನ್ನಡಭಾರತಿ ಸಂಶೋಧನಾರ್ಥಿಗಳ ವೇದಿಕೆಯು ಏರ್ಪಡಿಸಿದ್ದ ರಾಷ್ಟ್ರೀಯ ಸಂಶೋಧನಾ ವಿಚಾರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾಡಿದರು.                                  ಕನ್ನಡಭಾಷೆಯನ್ನು ಅನ್ನದ ಭಾಷೆಯಾಗಿ, ಜ್ಞಾನದಭಾಷೆಯಾಗಿಸಿಕೊಳ್ಳಬೇಕು.ಈವೊತ್ತು ಪ್ರತಿಯೊಬ್ಬರೂ ಹಣದ ಹಿಂದೆ ಬಿದ್ದಿದ್ದಾರೆ. ತೃಪ್ತಿಯಿಲ್ಲ. ದಾಹದಲ್ಲಿದ್ದಾರೆ. ಅವುಗಳ ನಿವಾರಣೆಯ ಸಾಧನಾ ಸಾಹಿತ್ಯ ಸಂಸ್ಕೃತಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅವರು ಕನ್ನಡ ಸಂಸ್ಕೃತಿ ಇಂದು ಚಲ್ಲಪಿಲ್ಲಿಯಾಗಿದೆ. ವಿಚಿತ್ರವಾದ ಆಧುನಿಕೋತ್ತರ ‌ಸಮಾಜದಲ್ಲಿದ್ದೆವೆ.ಬ್ರಾಂಡ್ ಮಾಡಿ ವಿಮರ್ಶೆ ಮಾಡಬಾರದು. ಈವೊತ್ತು ಸಾಹಿತ್ಯ ಲೋಕದಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತದೆ. ಈ ಹಿಂದೆ ಇದ್ದ ಆರೋಗ್ಯಕರ ವಾತಾವರಣವಿಲ್ಲ. ಮೆಲುದನಿಯಲ್ಲೂ ಸತ್ಯ ಅಡಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡಭಾರತಿ ನಿರ್ದೇಶಕ ಪ್ರೊ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು,  ಈವೊತ್ತಿನ ವಿಜ್ಞಾನಯುಗದಲ್ಲಿ ಆನಂದದ ಅನುಭವ ಕಷ್ಟಸಾಧ್ಯವಾಗತ್ತದೆ. ಸರಿದಾರಿ ತೋರಿಸುವ ಸಾಧನ ಸಂಸ್ಕೃತಿ ಮತ್ತು ಸಾಹಿತ್ಯವೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಎಸ್.ಎಂ.ಗೋಪಿನಾಥ್ ಅವರು ಮಾತನಾಡಿ ವ್ಯಕ್ತಿ ಮತ್ತು ಸಮಾಜದ ಸುಧಾರಣೆ ಸಾಧನಗಳು ಕನ್ನಡ ಮತ್ತು ಸಂಸ್ಕೃತಿ. ಬದುಕನ್ನು ಅರ್ಥಪೂರ್ಣ ವಾಗಿಸುವ ಸಾಹಿತ್ಯ ದ ಅಧ್ಯಯನ ಇಂದು ಅಗತ್ಯವಾಗಿದೆ ಎಂದರು.
ಹಿರಿಯ ಪ್ರಾಧ್ಯಾಪಕ ಪ್ರಶಾಂತನಾಯಕ ಮಾತಾಡಿದರು.      ಡಾ..ರವಿನಾಯ್ಕ ಸ್ವಾಗತಿಸಿದರು. ಡಾ.ನವೀನ ವಂದಿಸಿದರು. ಮಂಜುನಾಥ್ ನಿರೂಪಿಸಿದರು.
ಮಧ್ಯಾಹ್ನ ಜರುಗಿದ ಪ್ರಾಚೀನ ಕನ್ನಡ ಸಾಹಿತ್ಯ ಗೋಷ್ಠಿ ಅಧ್ಯಕ್ಷತೆಯನ್ನು ಕುಪ್ಪಂ, ದ್ರಾವಿಡ ವಿಶ್ವವಿದ್ಯಾಲಯದ ಪ್ರೊ.ದುರ್ಗಾಪ್ರವೀಣ್, ಮಧ್ಯಕಾಲೀನ ಕನ್ನಡ ಸಾಹಿತ್ಯ ಗೋಷ್ಠಿಯನ್ನು ಮದ್ರಾಸ್ ವಿಶ್ವವಿದ್ಯಾಲಯದ ಪ್ರೊ.ರಂಗಸ್ವಾಮಿ, ಆಧುನಿಕ ಕನ್ನಡ ಸಾಹಿತ್ಯ ಗೋಷ್ಠಿ ಅಧ್ಯಕ್ಷತೆಯನ್ನು ಪ್ರೊ.ಕುಮಾರಸ್ವಾಮಿ ಬೆಜ್ಜಹಳ್ಳಿ, ಸಾಹಿತ್ಯ ಮತ್ತು ಅನ್ಯಶಿಸ್ತು ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ.ಮೋಹನ್ ಚಂದ್ರಗುತ್ತಿ ವಹಿಸಿದ್ದರು. ಜನಪದಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ.ಎಸ್.ಎಂ.ಮುತ್ತಯ್ಯ ವಹಿಸಿದ್ದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ, ಸಂಶೋಧಕರು ಪ್ರಬಂಧಗಳನ್ನು ಮಂಡಿದರು.