ಅವಳ ಮೊನಚು ಮಾತುಗಳು
ಕತ್ತಲನ್ನು ತುಂಡರಿಸಿ
ಎದೆಗೆ ನಾಟಿ ಎಚ್ಚರಿಸುವ ಜ್ವಾಲಾಮುಖಿ…
ಕಡು ಕೋಪದ ನಡುವೆ
ತೂರಿ ಬೀಡುವ ಹುಸಿ ನಗೆ
ಸಂಕಟಗಳ ದಿಕ್ಕಾಪಾಲಾಗಿಸೋ ಬಿರುಗಾಳಿ…
ನಾನೇ ಮರೆತಿದ್ದ ಸಾಲುಗಳು
ನನ್ನ ಕೆಣಕುವಾಗ
ಅವಳೇ ಬರೆದ ಅವಳ ಹೆಸರು
ನೆತ್ತಿ ಸುಡುವ ಉರಿ ಬಿಸಿಲ ನಡುವೆ
ಮೂಡಿ ಬಂದ ಮಾಯ ಮರೀಚಿಕೆ…
ಕೈ ಚಾಚಿದಷ್ಟು ಅಸ್ಪಷ್ಟ ರೇಖೆಗಳು
ಅವಳೇ ಮಡಚಿಟ್ಟ ಪುಸ್ತಕದೊಳಗೆ ಅವಳದೇ ನಗು
ಒಮ್ಮೆಲೇ ಬೀಳುವ ಮಳೆ
ನಿರಾಳ ರಾತ್ರಿಗೆ ನೂರಾರು ಮುಖಗಳು
ಎಲ್ಲಿಂದಲೋ ಬಂದವರು
ಅವಳ ಕುರಿತು ಧ್ಯಾನಿಸುವಾಗ
ಅವಳಾಡಿದ ಮಾತು ಬೆಳಕಂತೆ ಕಣ್ಮುಂದೆ ನಲಿದಿತ್ತು…
ಚಂದ್ರ ಕರಗಿ ಬಿದ್ದ ಊರಿಗೆ
ಈಗಲೂ ಅವಳ ಹೆಜ್ಜೆ ಗುರುತುಗಳು
ಅಂಕುಡೊಂಕಾದ ದಾರಿಯಲ್ಲಿ ಬಿದ್ದಿಹವು
ಹರಿವ ಕತ್ತಲ ನಡುವೆ
ಈಗಲೂ ಅವಳ ಸೂಜಿ ಮಾತು
ಎದೆಗೆ ತಾಗಿದ ಗುಂಡಿನಷ್ಟೆ ವೇಗವಾಗಿ ನುಗ್ಗುತಿಹುದು…
-ಸಿದ್ದು ಜನ್ನೂರ್, ಚಾಮರಾಜನಗರ