ತಾರತಮ್ಯ ಮಾಡದೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಆಗ್ರಹಿಸಿ ನಾಳೆ(ಜು.10) ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ಸಾವಿರಾರು ಅತಿಥಿ ಉಪನ್ಯಾಸಕರು ಹೋರಾಟದಲ್ಲಿ ಭಾಗಿ

File photo

ಬೆಂಗಳೂರು, ಜು.9: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ತಾರತಮ್ಯ ಮಾಡದೇ ಪ್ರಸಕ್ತ  ಸಾಲಿಗೂ ಮುಂದುವರೆಸಬೇಕು‌ ಬೇಡಿಕೆ ಸೇರಿದಂತೆ ತಮ್ಮ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸ‌ಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು‌ ದಿನದ ಬೃಹತ್ ಪ್ರತಿಭಟನೆಯನ್ನು  ಹಮ್ಮಿಕೊಂಡಿದೆ.                    ಈ ಕುರಿತು ಸಂಘದ ಅಧ್ಯಕ್ಷ ಲೋಕೇಶ್ ಪಿ.ಸಿ ಹಾಗೂ ಗೌರವ ಅಧ್ಯಕ್ಷ ಅರಿಫ್ ಕಾರ್ಲೆ ಅವರು ಮಾಹಿತಿ‌ ನೀಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಾವಿರಾರು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ  ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಲಿದ್ದಾರೆ ಎಂದು ತಿಳಿಸಿದರು.                        ಒಬ್ಬ ತಾತ್ಕಾಲಿಕ ನೌಕರನ ವಿರುದ್ಧ ಇನ್ನೊಬ್ಬ ತಾತ್ಕಾಲಿಕ ನೌಕರರನ್ನು ಆಯ್ಕೆ ಮಾಡಬಾರದು ಎಂಬ ಅನೇಕ ನಿದರ್ಶನಗಳಿದ್ದರೂ, ನೇರವಾಗಿ ನಮ್ಮದೇ ಪ್ರಕರಣಗಳಲ್ಲಿ ಈ ವಿಷಯವನ್ನು ಉಲ್ಲೇಖಿಸಿ ನ್ಯಾಯಾಲಯವು ಮಧ್ಯಂತರ ತೀರ್ಪು ನೀಡಿದ್ದರೂ ಕೂಡ ಪರಿಗಣಿಸದೆ 2025-26ರ ಶೈಕ್ಷಣಿಕ ವರ್ಷಕ್ಕೆ ಹೊಸ ಅತಿಥಿ ಉಪನ್ಯಾಸಕರ ಆಯ್ಕೆಗೆ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಿದ್ದು  ದುರದೃಷ್ಟಕರ ಎಂದು ನೋವು ವ್ಯಕ್ತ ಪಡಿಸಿದ್ದಾರೆ.   ನೆಟ್, ಸ್ಲೆಟ್ ಮತ್ತುಬಪಿಎಚ್.ಡಿ ಪದವಿ  ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಹೇಳಿರುವ ಅಧಿಸೂಚನೆಯನ್ನು  ಕೂಡಲೇ ಹಿಂಪಡೆದು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಮುಂದುವರೆಯಲು ಅವಕಾಶ ಮಾಡಿಕೊಡಬೇಕು  ಎಂದು ಸಂಘ ಒತ್ತಾಯಿಸಿದೆ.

                      ಲಭ್ಯವಿರುವ ಕಾರ್ಯಭಾರಕ್ಕೆ 2024-25ನೇ ಸಾಲಿನಲ್ಲಿ ಸೇವೆ ಸಲ್ಲಿಸಿರುವ ಮತ್ತು ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಆಯ್ಕೆ ಮಾಡಿಕೊಂಡು, ಉಳಿದ ಕಾರ್ಯಭಾರಕ್ಕೆ ಮಾತ್ರ ಹೊಸದಾಗಿ ನೇಮಕಾತಿ ಮಾಡಿಕೊಳ್ಳಬೇಕೆಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘವು ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ಆಗ್ರಹಿಸಿದೆ.

ನಮ್ಮ ರಾಜ್ಯದಲ್ಲಿ ಇರುವಂತೆಯೇ ಇತರೆ ರಾಜ್ಯಗಳಲ್ಲಿಯೂ ಕೂಡ ಯುಜಿಸಿ ಮಾನದಂಡ ಹೊಂದಿರುವ ಮತ್ತು ಹೊಂದಿಲ್ಲದ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಲಿನ ರಾಜ್ಯ ಸರ್ಕಾರಗಳು ಸೇವೆಗೆ ಒತ್ತು ನೀಡಿ ಅವರನ್ನು ಮುಂದುವರಿಸುತ್ತಾ ಬಂದಿರುವುದನ್ನು ಸಂಘದ ಪದಾಧಿಕಾರಿಗಳು ನೆನಪಿಸಿದ್ದಾರೆ.

HARGARBATH SING V/S STATE OF PUNJAB ಪ್ರಕರಣದಲ್ಲಿ   ಅರ್ಹತೆ ಪಡೆದು ಬರುವ ಅಭ್ಯರ್ಥಿಗಳಿಗಿಂತ ಹಲವು ವರ್ಷಗಳ ಸುದೀರ್ಘ ಸೇವೆ ಸಲ್ಲಿಸುತ್ತಾ ಬಂದಿರುವವರ ಸೇವೆಯು ಅತ್ಯಂತ ಉತ್ತಮವಾಗಿರುತ್ತದೆ ಎಂಬ ಅಭಿಪ್ರಾಯವನ್ನು ನ್ಯಾಯಾಲಯವು ವ್ಯಕ್ತಪಡಿಸಿ ಸೇವೆಗೆ ಹೆಚ್ಚು ಮಾನ್ಯತೆ ನೀಡಿ ಅಲ್ಲಿನ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಅವಕಾಶ ಕಲ್ಪಿಸಿ ಕೊಟ್ಟಿರುತ್ತದೆ.

ಮುಖ್ಯಮಂತ್ರಿಗಳಾದ ಶ್ದ್ದ ಸಿದ್ದರಾಮಯ್ಯ ಅವರು ಪ್ರತಿ ಪಕ್ಷದ ಮುಖಂಡರಾಗಿದ್ದ ಸಂದರ್ಭದಲ್ಲಿ ಸದನದ ಬಾವಿಗೆ ಇಳಿದು ಅತಿಥಿ ಉಪನ್ಯಾಸಕರನ್ನು, ಅವರ ನಿಸ್ವಾರ್ಥ ಸೇವೆ ಪರಿಗಣಿಸಿ ಇರುವ ಎಲ್ಲಾ ತೊಡಕುಗಳನ್ನು ತೆಗೆದುಹಾಕಿ ಖಾಯಂ ಮಾಡಬೇಕೆಂದು ಆಗ್ರಹಿಸಿ ಹೋರಾಟ ಮಾಡಿದ್ದರು. ಆದರೆ ಪ್ರಸ್ತುತ ಮುಖ್ಯಮಂತ್ರಿಗಳಾಗಿ ತಮ್ಮ ಸರ್ಕಾರದಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಕಡೆಗಣಿಸಿ ಹಲವರಿಗೆ ಮನೆಯ ಕಡೆಗೆ ಕಳುಹಿಸುವ ತೀರ್ಮಾನ ಕೈಗೊಂಡಿರುವುದು ನುಡಿದಂತೆ ನಡೆಯುವ  ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು‌ ತಿಳಿಸಿದೆ.

ಸಂಘದ ರಾಜ್ಯ ಸಹ ಕಾರ್ಯದರ್ಶಿ ಭರತೇಶ್ ಎಂ ಮತ್ತು ಸದಸ್ಯ ಎರ್ರಿಸ್ವಾಮಿ ಅವರು ಮಾತನಾಡಿ ಬಳ್ಳಾರಿ ವಿಜಯನಗರ ಜಿಲ್ಲೆಗಳ ಎಲ್ಲಾ‌‌ ಸರ್ಕಾರಿ ಪ್ರಥಮ‌ದರ್ಜೆ ಕಾಲೇಜುಗಳ ನೂರಾರು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ‌ ಪಾಲ್ಗೊಳ್ಳುವರು ಎಂದು ತಿಳಿಸಿದರು.