ನಸು ನಾಚಿಯಿಂದಲೆ
ಸಮ್ಮತಿಯಿಟ್ಟ
ಕಾಲ್ಬೆರಳ ಸುತ್ತ ಪ್ರದಕ್ಷಿಣೆ
ಹಾಕಿ ಬಂದ ಉಂಗುರ ನಾನು .
ಏಳೇ ಏಳು ಹೆಜ್ಜೆ
ಅಷ್ಟರಲ್ಲೆ ನಾನೆಲ್ಲಾದರೂ ಕಳೆದುಹೋದರೆ ?
ಎಂಬ ಧಾವಂತದಲ್ಲಿ ನನ್ನ ಕಿರುಬೆರಳಿಡಿದು
ನಡೆಸಿದ ಕೈಗಳಲ್ಲಿನ ಬಳೆಯ ನಾದ ನಾನು .
ಕೊರಳ ಸುತ್ತಿ ಬಂದ ಒಲವಿಗೆ
ಜೋತು ಬಿದ್ದು ಜೋಕಾಲಿಯಾಡುವ
ಒಂದು ಸಣ್ಣ ಕೂಸಿನಂಥ
ಬಂಗಾರದ ಪದಕ ನಾನು .
ಹಣೆ ಮೇಲಿನ ಚಂದ್ರ
ಮುದ್ದು ಮುಖದ ತುಂಬ
ಸುರಿದ ಬೆಳದಿಂಗಳ ಕುಡಿಯಲು
ಕೈ ಚಾಚಿ ಬರುವ ಕಡಲು ನಾನು .
ನಿನ್ನ ಮುಡಿಯೆರಿದ ಸಂಭ್ರಮವನ್ನು
ಊರಿಗೆಲ್ಲಾ ಹಂಚುವ
ಏಳು ತೂಕದ ಮಲ್ಲಿಗೆಯ
ಘಮಲಿನ ಅಮಲಿಗೆ ದಾಸ ನಾನು .
ನಾನೆಂದರೆ ಇಷ್ಷೆ . ಕೇವಲ ಇಷ್ಟೆ
ನೀನೆಂದರೆ …..
ಅಡಿಯಲಿದ್ದೆ ನಾನು
ಮುಡಿಗೇರಿಸಿ ಮೆರೆಸಿಬಿಟ್ಟೆ ನೀನು
ಒಲವನ್ನೆ ಬಿತ್ತವಳು ನೀನು
ಒಲವನ್ನೆ ಹೆತ್ತವಳು ನೀನು
ಉಹುಃ , ಇಷ್ಟೆ ಅಲ್ಲಾ
ಮತ್ತೆ , ನೀನೆಂದರೆ …….
-ಶ್ರೀ…….., ಬೆಂಗಳೂರು
—–