ಅನುದಿನ‌ ಕವನ-೧೬೬೦, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಬೊಮ್ಮ…. ಕೇಳಲೇ ಬೇಕು ನಿನ್ನ

ಬೊಮ್ಮ….. ಕೇಳಲೇ ಬೇಕು ನಿನ್ನ!

ಬೊಮ್ಮ…
ಒಪ್ಪಲೇಬೇಕು ನೀನೊಬ್ಬ
ಅದ್ಭುತ ಚಮತ್ಕಾರೀ ಕಲಾವಿದ
ಅಸಂಖ್ಯ ಕಲಾಕೃತಿಗಳು ವಿಶಿಷ್ಟ
ಒಂದೊಂದೂ ವಿಭಿನ್ನ ವಿಚಿತ್ರ

ಬೊಮ್ಮ..
ನಿನ್ನ ಕೇಳಲೇ ಬೇಕು ಇದನ
ಸೃಷ್ಟಿಸಲು ಒಂದು ಹೆಣ್ಣನ್ನು
ತಗೊಂಡೆ ಅದೆಷ್ಟು ವೇಳೆ
ಮೇಳೈಸಿ ಕೊಂಡೆ ನಿನ್ನೆದೆಯಲ್ಲಿ
ಅದೆಷ್ಟು ಭಾವನೆ, ತಾಳ್ಮೆಗಳ

ಬೊಮ್ಮ..
ನಿನ್ನಲ್ಲೊಟ್ಟುಗೂಡಿಸಿದ ಭಾವನೆ
ತಾಳ್ಮೆಗಳನೆಲ್ಲ ಇನಿತೂ ಉಳಿಸದೆ
ಅವಳೆದೆಯಲ್ಲಿ ಕಣ ಕಣದಲ್ಲಿ
ಅಚ್ಚೊತ್ತಿ ಎರಕ ಹೊಯ್ದು ಬಿಟ್ಟೆಯಾ
ಇರಬೇಕು ಹೀಗೇ ನೀನೆಂದು

ಬೊಮ್ಮ…,
ಮೆಚ್ಚಲೇ ಬೇಕು ನಿನ್ನ ಈ ಕಲೆಯ
ಮನದಿ ಮೂಡಿದವನು ಆಯ್ದು
ಎದೆ ಗೂಡುಗಳಲಿ ಬಂಧಿಸಿಡು
ಗಟ್ಟಿಯಾಗಿ ಹೊರಬಿಡದೆ ಎಲ್ಲನೂ
ಎಂದು ಮನದಟ್ಟು ಮಾಡಿದ ಶೈಲಿಯ

ಬೊಮ್ಮ..
ನೀ ಬಲು ನಿರ್ಭಾವುಕ ನಿರ್ದಯಿ
ಕೊಡಲಿಲ್ಲ ಸ್ವಾತಂತ್ರ್ಯ ಅವಳಿಗೆ
ಹೇಳಬೇಕೆಂದುದನು ಹೇಳಲು
ಅದ್ಹೇಗೆ ಕೊಟ್ಟೆ ಆ ಗಟ್ಟಿತನ
ಸಹಿಸಲು ಅದನೆಲ್ಲ ಅಚ್ಚರಿ ನಂಗೆ

ಬೊಮ್ಮನುಡಿದ ಮೆಲ್ಲ…..
ಕಂದ ಸಹನೆ, ತಾಳ್ಮೆ,ಮೃದುತೆ, ಆರ್ದ್ರತೆ
ಏನೆಂದು ತೋರಬೇಕಿತ್ತು ಈ ಜಗಕೆ
ಸೃಷ್ಟಿಸಿದೆ ಎಲ್ಲಾ ತುಂಬಿಸಿ ಅವಳನು
ಕೊಡದೆ ಸ್ವಾತಂತ್ರ್ಯ ಅವಳ ಮನಬಿಚ್ಚಲು
ಪ್ರಳಯವಾದೀತೆಂದು ಹೆದರಿ ಕಂದಾ

-ಸರೋಜಿನಿ ಪಡಸಲಗಿ,
ಬೆಂಗಳೂರು