
ಬಳ್ಳಾರಿ, ಜು.17: ಹಲವು ದಿನಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ. ರಾಧಾಕೃಷ್ಣ ಅವರು ಗುರುವಾರ ಸಂಜೆ ಹೈದ್ರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಬಳ್ಳಾರಿ, ಹೊಸಪೇಟೆ, ಚಳ್ಳಕೆರೆ, ಹುನುಗುಂದ, ಪಟ್ಟಣಗಳಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳ ಸ್ಥಾಪಕರಾದ ಶ್ರೀ ರಾಧಾಕೃಷ್ಣರವರು ಶಿಕ್ಷಣ ಪ್ರೇಮಿ ಎಂದೇ ಜನಪ್ರಿಯರಾದವರು.
ಪತ್ನಿ ರಾಧಿಕ, ಹಿರಿಯ ಪುತ್ರ ವಿಷ್ಣು,, ಕಿರಿಯ ಪುತ್ರ ಸಂಜಯ್ ಕೃಷ್ಣ ಸೇರಿದಂತೆ ಅಪಾರ ಬಂಧು ಮಿತ್ರರು, ಅಭಿಮಾನಿ ಬಳಗ, ಶಿಷ್ಯವೃಂದವನ್ನು ಅಗಲಿದ್ದಾರೆ.
ಇವರ ಮೃತ ದೇಹವನ್ನು ಗುರುವಾರ ರಾತ್ರಿ ಬಳ್ಳಾರಿಗೆ ತರಲಾಗುತ್ತಿದೆ.
ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನ ಬೊಮ್ಮನಹಾಳ್ ಗ್ರಾಮದಲ್ಲಿ ಪಯ್ಯಾವುಲ ರಾಮಕೃಷ್ಣಪ್ಪ ಮತ್ತು ಜಾನಕಮ್ಮ ರೈತ ದಂಪತಿಯ ಮಗನಾಗಿ ಜ.10, 1960ರಲ್ಲಿ ಜನಿಸಿದ್ದರು.
ಬೊಮ್ಮನಹಾಳ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ರಾಯದುರ್ಗದಲ್ಲಿ ಪಿಯುಸಿ, ಬಿಕಾಂ ಪದವಿಯನ್ನು ಬಳ್ಳಾರಿಯ ವೀರಶೈವ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ ಎಂ ಕಾಂ, ಎಂಫಿಲ್ ಓದಿದ್ದಾರೆ. ಮಂಗಳೂರು ವಿವಿಯಲ್ಲಿ ಪಿಎಚ್ ಡಿ ಪಡೆದಿದ್ದಾರೆ. ಗುಂತಕಲ್ಲಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಆರಂಭ ಮಾಡಿದ್ದರು, ನಂತರದಲ್ಲಿ ತುಮಕೂರಿನ ಕೊರಟಗೆರೆ ಸರಕಾರಿ ಪದವಿ ಕಾಲೇಜಿನಲ್ಲಿ 1986ರಲ್ಲಿ ಸರಕಾರಿ ಸೇವೆ ಆರಂಭಿಸಿ ನಂತರದಲ್ಲಿ ಬಳ್ಳಾರಿಯ ಸರಳಾದೇವಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಂಪ್ಲಿ ಸೇರಿದಂತೆ ಇತರ ಕಡೆಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಬಳ್ಳಾರಿ ಸರಕಾರಿ ವಾಣಿಜ್ಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ 2020ರಲ್ಲಿ ನಿವೃತ್ತಿ ಹೊಂದಿದ್ದರು. ತಮ್ಮ ವೃತ್ತಿಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪ ಆಗಿದ್ದರು.
2005ರಲ್ಲಿ ಇವರ ಸಲಹೆ ಮೇರೆಗೆ ಆರಂಭವಾದ ಶ್ರೀ ಚೈತನ್ಯ ಪಿಯುಸಿ ಕಾಲೇಜು 340 ಮಕ್ಕಳೊಂದಿಗೆ ಆರಂಭ ಮಾಡಿದ್ದರು. ಈಗ ತಮ್ಮದೇ ಆದ ಪಿಆರ್ ಕೆ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ, ರಾಜ್ಯದ ಬಳ್ಳಾರಿ, ಚೆಳ್ಳಕೆರೆ, ಹೊಸಪೇಟೆ, ಇಳಕಲ್, ಕೊಪ್ಪಳ ಮತ್ತು ವಿಜಯಪುರದಲ್ಲಿ ಕಾಲೇಜು ಆರಂಭಿಸಿ ಸುಮಾರು 6 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸಮಾಜದ ವಿವಿಧ ಸ್ತರಗಳ ಸಮಾಜಮುಖಿ ಮತ್ತು ಸಮಾನ ಮನಸ್ಸುಗಳು ಸೇರಿ ರಚಿಸಿಕೊಂಡ ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷರಾಗಿ, ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸನ್ಮಾರ್ಗದ ಬೆನ್ನೆಲುಬಾಗಿ ಸಾವಿರಾರು ವಿದ್ಯಾರ್ಥಿಗಳು, ಬಡವರ ಸೇವೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಉನ್ನತ ಶಿಕ್ಷಣದಲ್ಲಿ ಗುಣಾತ್ಮಕತೆ ಸಮಿತಿಯ ಜಿಲ್ಲಾ ಸಂಚಾಲಕರಾಗಿ 2002 ರಿಂದ 2012ರವರೆಗೆ ಸೇವೆ ಸಲ್ಲಿಸಿದ್ದಾರೆ. ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಳ್ಳಾರಿ ಕಾಮರ್ಸ್ ಟೀಚರ್ಸ್ ಫೋರಂ ಅಧ್ಯಕ್ಷರಾಗಿ 2015 ರಿಂದ 2018ರವರೆಗೆ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿಯಾಗಿ 2013 ರಿಂದ 2018ರವರೆಗೆ ಕೆಲಸ ಮಾಡಿದ್ದಾರೆ. ಹೀಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.
ಪಿಆರ್ ಕೆ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಒಳ್ಳೆಯ ಬೋಧಕರಾದ ರಾಧಾಕೃಷ್ಣರವರು ವಿಧಿವಶರಾಗಿರುವುದು ದುರ್ದೈವವೇ ಸರಿ. ಉತ್ತಮ ಮಾರ್ಗದರ್ಶಕರು, ಶಿಕ್ಷಣ ಪ್ರೇಮಿಗಳು, ತಮ್ಮದೇ ಕೆಲಸದ ಮೂಲಕ ಸಮಾಜ ಸುಧಾರಣೆ ಮಾಡಿ ಸಮಾಜ ಸುಧಾರಕರಾಗಿದ್ದರು. ಸಾವಿರಾರು ಮಕ್ಕಳ ಬಾಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ದಾರಿದೀಪ ಆಗಿರುವ ರಾಧಾಕೃಷ್ಣ ಅವರದು ಮಾದರಿ ವ್ಯಕ್ತಿತ್ವ.
ಸಾಮಾನ್ಯ ರೈತಾಪಿ ಕುಟುಂಬದಲ್ಲ್ಲಿ ಹುಟ್ಟಿದ ರಾಧಾಕೃಷ್ಣ ಅವರದು ದಣಿಯವರಿಯದ ಜೀವ. ಕೊನೆಯ ಉಸಿರಿರುವವರಗೆ ಶಿಕ್ಷಣ ಸೇವೆಯಲ್ಲಿಯೇ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಕೆಲ ತಿಂಗಳುಗಳ ಹಿಂದೆಯಷ್ಟೆ ತಾಯಿ ಮೃತಪಟ್ಟಿದ್ದರು, ಅವರ ಹಿಂದೆಯೇ ಮರಳಿಬಾರದೂರಿಗೆ ರಾಧಾಕೃಷ್ಣ ಅವರು ಪ್ರಯಾಣ ಬೆಳೆಸಿದ್ದಾರೆ.
ಸಾರ್ವಜನಿಕ ದರ್ಶನ:ಅಂತಿಮ ಸಂಸ್ಕಾರ
ಜು.18ರಂದು ಶುಕ್ರವಾರ ಬೆಳಿಗ್ಗೆಯಿಂದ ಕಂಟೋನ್ಮೆಂಟ್ ಪ್ರದೇಶದ ಸೂರ್ಯ ಕಾಲೋನಿಯ ಒಂದನೇ ಕ್ರಾಸ್‌ನಲ್ಲಿರುವ ಪಿ.ಆರ್ ಕೆ ಅವರ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ನಗರದ ಹರಿಶ್ಚಂದ್ರ ಘಾಟ್ ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
—–