ಮೋಜಿನಾಟವಿದಲ್ಲ ರಾಜನಂತೆಯೆ ಮೆರೆಯೆ
ಭೋಜನವ ಕೂಡಿಡಲು ಸಾಧ್ಯವೇನಿಲ್ಲಿಲ್ಲ
ಭಾಜನವು ಸಂಸಾರ ಸಾಗರದ ನಿರ್ವಹಣೆ
ಗೀಜಗದ ಗೂಡಂತೆ ಮಾಡೊಂದು ನಮಗಿರಲು
ಅಕ್ಕಪಕ್ಕದಿ ನೋಡಿ ರೆಕ್ಕೆಯಗಲಿಸಿ ತಾನು
ಸಿಕ್ಕಿ ಸಿಕ್ಕಿದ ಹುಲ್ಲು ಕಡ್ಡಿ ಗುಡ್ಡೆಯ ಮಾಡಿ
ಕೊಕ್ಕಿನಿಂದಲಿ ಹೆಕ್ಕಿ ಸಿಕ್ಕಿಸುತೆ ಜೋಪಾನ
ಹಕ್ಕಿಗಾಯಿತು ನೋಡಿ ಭದ್ರತೆಯ ಗೂಡೀಗ
ಓದಿಲ್ಲ ಬರೆದಿಲ್ಲ ಜನುಮಕಂಟಿದ ಬೆಲ್ಲ
ಸಾಧಿಸುವ ಛಲವೇನು ತಾನಂತು ಹೊತ್ತಿಲ್ಲ
ಬಾಧೆಗಳ ನೀಗಿಸಲು ಕಂಡುಕೊಂಡಿಹ ಹಾದಿ
ಶೋಧನೆಗೆ ವರದಂತೆ ಮನುಕುಲದ ಸಾಧನೆಗೆ
ಹೊಕ್ಕಳಿನ ಮಕ್ಕಳಿಗೆ ರಕ್ಷಣೆಯ ನೀಡುವರೆ
ಇಕ್ಕಳದ ಹಿಡಿತವಿದೆ ಗಾಳಿಗಲುಗಾಡುತಿದೆ
ಒಕ್ಕಲಾಗುವ ಮುನ್ನ ಹಕ್ಕಲಿಗೆ ದೂರಾಗಿ
ರೆಕ್ಕೆಗಳ ಬಲವೀಯೆ ಗುಕ್ಕು ನೀಡುವ ಭಾಗ್ಯ
ಪ್ರಕೃತಿಯ ವರದಾನ ದೇವ ದೇವನ ನೇಮ
ಸುಕೃತವ ಗೈಯುವುದೆ ಪ್ರತಿಜೀವಿಗೆಮ ನಿಯಮ
ಪ್ರಾಕೃತದ ಕಲಿಕೆಯಿದು ಪರಿಣಾಮ ಬಲುಮಧುರ
ವಿಕೃತವನು ನೀವ್ ತೋರಿ ಕೀಳದಿರಿ ಮಾನವರೆ
ಹಕ್ಕಲು = ಚೆಲ್ಲಾಡುವಿಕೆ
ಒಕ್ಕಲು = ಮನೆತನ
ಪ್ರಾಕೃತ=ನೈಸರ್ಗಿಕವಾದ
-ಶಿವೈ(ವೈಲೇಶ.ಪಿ.ಎಸ್.), ಕೊಡಗು