ದೇವದಾಸಿಯ ಸ್ವಗತ
ನನ್ನ ನರಗಳ ಹೊಸೆದು ಬತ್ತಿ ಮಾಡಿ
ಒಡಲ ನೆಣ ಬಸಿದು ದೀಪ ಹಚ್ಚಿದ್ದೇನೆ
ಕುರುಡು ದೇವರ ಅಂತಃಪುರಕೆ
ದೇವಾನುದೇವತೆಗಳು
ನನ್ನ ತೊಗಲ ತಿಂದು
ಕಣ್ಣೀರು ಕುಡಿದು ಸ್ವರ್ಗ ಸೇರುತ್ತಾರೆ
ನರಕ ನನಗಷ್ಟೇ ;
ಇಲ್ಲಿ ಹೂ ಗಳೂ ನರಳುತ್ತವೆ
ಲೋಕಾನುಲೋಕ ತುಳಿದ ಚರಿತ್ರೆಯಲ್ಲಿ
ನಾನು ಕತೆಯಷ್ಟೇ…
ದೇವರು ತಿಂದ ಮೇಲೆ ಗಣಗಳಿಗೆ
ಇಟ್ಟ ಹೆಣದ ಎಡೆ
ಪ್ರೀತಿ ನಿಷೇಧಿಸಿದ ಊರಿನಲ್ಲಿ
ದಿನವೂ ಕನಸುಗಳ ಹಡೆಯುತ್ತೇನೆ
ಜೀವವಿದ್ದರೂ
ನಾನೀಗ ಗೋಡೆ ಮೇಲಿನ ಚಿತ್ರವಷ್ಟೆ.
-ಎನ್ ರವಿಕುಮಾರ ಟೆಲೆಕ್ಸ್, ಶಿವಮೊಗ್ಗ
—–