ಅನುದಿನ ಕವನ-೧೬೬೭, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ:ಒಲವ ಹಂಬಲ

ಒಲವ ಹಂಬಲ

ನನ್ನೀ ಮಂಕು ಕವಿದ ಭಾವಕೆ ..
ಪ್ರತ್ಯುಷೆಯ ರವಿಯ ರಜತ ರಶ್ಮಿಯಂತೆ ಹಿತವಾಗಿ ಸೋಕು ನನ್ನ…
ಈ ಮನದಿ ನೀರಸತೆಯ ಇಬ್ಬನಿ ಕರಗಿ ಒಲವ ಭಾವ ಹೂವಾಗಿ ಅರಳಲಿ.!

ತಮವೇ ಹೊದ್ದು ನಿಂತ ನನ್ನೀ ಮನಕೆ..
ಪೌರ್ಣಮಿಯ ರಜನಿಕಾಂತಿಯಂತೆ ನವಿರಾಗಿ ಸೋಕು ನನ್ನ…
ಈ ಮನದ ಕಡಲಲಿ ನವಭಾವಗಳು ಮೇಳೈಸಿ ಉಲ್ಲಾಸದಿ ಉಕ್ಕೇರಲಿ.!

ನನ್ನೀ ಬೇಸರದ ಬಾಂದಳಕೆ ಕಾರ್ಮುಗಿಲ ಮಳೆಯಾಗಿ ಸೋಕು ನನ್ನ..
ಈ ಮನದಿ ಪ್ರೇಮಭಾವಗಳು ಗರಿಗೆದರಿ‌ ನವಿಲಂತಾಗಿ ನರ್ತಿಸಲಿ.!

ನನ್ನೀ ಖಿನ್ನತೆಯ ಮಾಮರಕೆ ಕೋಗಿಲೆಯಾಗಿ ಕೂಗುತ ಬಂದು ಸೋಕು ನನ್ನ..
ನಲ್ಮೆಯಲಿ ಒಲವೊಂದು ಹೊಸದಾಗಿ ಪಲ್ಲವಿಸಲಿ..!

ನನ್ನೀ ಮನದಿ ಹೇಳಲಾಗದೆ ಚಡಪಡಿಸೋ ಅವ್ಯಕ್ತ
ಭಾವಕೆ ನದಿಯಂತೆ ಹರಿಯುತ್ತಾ ನುಗ್ಗಿ ಸೋಕು ನನ್ನ..
ನಿರ್ಭೀಡೆಯಿಂದ ಭಾವಗಳು ‘ಜಲಪಾತ’ವಾಗಿ ಒಲವ ಪ್ರಪಾತಕ್ಕೆ ಧುಮ್ಮಿಕ್ಕಿ ಭೋರ್ಗರೆಯಲಿ..!

ಸರಾಗವಾಗಿ ಮೂಡದ ಭಾವಾಕ್ಷರಕ್ಕೆ ಪದ ಲಾಲಿತ್ಯವಾಗಿ ಭಾವ ಸಾಂಗತ್ಯ ನೀಡುತ ಸೋಕು ನನ್ನ..
ಹೊಸದೊಂದು ಪ್ರೇಮಭಾಷ್ಯ ಕವನವಾಗಿ ನನ್ನ ಬರಹದಿ ಮೂಡಿ ಬರಲಿ..!!

ಇಂತಿ ನಿನ್ನ ಒಲವಾಕಾಂಕ್ಷಿ!

-ಶಾಂತಾ ಪಾಟೀಲ್, ಸಿಂಧನೂರು