ಅನುದಿನ ಕವನ-೧೬೬೮, ಕವಿ:ಎ.ಎನ್.ರಮೇಶ್.ಗುಬ್ಬಿ. ಕವನದ ಶೀರ್ಷಿಕೆ: ಜೋಕೆ..!

“ಇದು ಅನುದಿನವು ನಮ್ಮೊಳಗೆ ನಾವೇ ಎಚ್ಚರಿಸಿಕೊಳ್ಳಬೇಕಾದ ಬದುಕಿನ ನಡೆಗಳ ಕವಿತೆ. ಅನುಕ್ಷಣವೂ ಅಂತರಾತ್ಮ ಅಡಿಗಡಿಗೂ ಅನುರಣಿಸುತ್ತಾ ನಮ್ಮನ್ನು ಜಾಗೃತಗೊಳಿಸಬೇಕಾದ ಬೆಳಕಿನ ನುಡಿಗಳ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವದ ಸತ್ಯ-ಸತ್ವಗಳ ಸಾರವಿದೆ. ಅರ್ಥೈಸಿದಷ್ಟೂ ಜೀವನದ ತತ್ವ-ಮಹತ್ವಗಳ ವಿಸ್ತಾರವಿದೆ. ಅಂತಿಮವಾಗಿ ಇಲ್ಲಿ ನಮ್ಮ ಬಾಳಪಯಣಕೆ ನಮ್ಮದೇ ಮಾರ್ಗದರ್ಶನ. ನಮ್ಮದೇ ದಿಗ್ದರ್ಶನ. ಏನಂತೀರಾ..?”                                                      -ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಜೋಕೆ..!

ಬೀಳಬಾರದು ನಡಿಗೆ
ಸಂದೇಹಗಳ ಮಡಿಲಿಗೆ
ಬೆಚ್ಚಬಾರದು ಗುಂಡಿಗೆ
ಸವಾಲುಗಳ ಸಿಡಿಲಿಗೆ.!

ನಾರಬಾರದು ವ್ಯಕ್ತಿತ್ವ
ಹೆಸರಿನ ತೆವಲಿಗೆ.!
ಜಾರಬಾರದು ಸತ್ವತತ್ವ
ದುಮ್ಮಾನ ದಿಗಿಲಿಗೆ.!

ಸೊಕ್ಕಬಾರದು ಹೆಗಲು
ಹೊಗಳಿಕೆ ಹೊನಲಿಗೆ
ಬಿಕ್ಕಬಾರದು ಒಡಲು
ತೆಗಳಿಕೆಗಳ ಕಡಲಿಗೆ.!

ಹಪಿಸಬಾರದು ಜೀವ
ವಾಂಛೆಗಳ ತೊಟ್ಟಿಲಿಗೆ
ತಪಿಸಬಾರದು ಭಾವ
ಅವಕಾಶಗಳ ಮೆಟ್ಟಿಲಿಗೆ.!

ಆಡಬಾರದು ಮನಸು
ಅಸೂಯೆ ಕೆನ್ನಾಲಿಗೆಗೆ.
ಈಡಾಗಬಾರದು ಕನಸು
ಭ್ರಮೆಗಳ ಹೊನ್ನಾಲಿಗೆಗೆ.!

ಕೆಡಬಾರದು ಸಂಬಂಧ
ಮೇಲಾಟಗಳ ಅಳಲಿಗೆ
ಸುಡಬಾರದು ಅನುಬಂಧ
ನಿರೀಕ್ಷೆಗಳ ತೊಳಲಿಗೆ.!

ಹಿಗ್ಗಲೇಬಾರದು ನಡಿಗೆ
ಕೀರ್ತಿಶನಿಯ ಅಮಲಿಗೆ
ಕುಗ್ಗಬಾರದು ಅಡಿಗಡಿಗೆ
ಕುಹಕಗಳ ಘಮಲಿಗೆ.!

ಬರಬಾರದು ಬದುಕು
ಬೆತ್ತಲಾಗುತ ಬಯಲಿಗೆ
ಆರಬಾರದು ಬೆಳಕು
ಕತ್ತಲಿನಾ ಖಯಾಲಿಗೆ.!

-ಎ.ಎನ್.ರಮೇಶ್.ಗುಬ್ಬಿ.