ಅನುದಿನ ಕವನ-೧೬೭೦, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಇವನದೊಂದು
ಮೌನ
ಕಾರಣವಾಗಿ
ಭೇಟಿ ಮಾಡಬೇಡವೆಂದು
ಅಪ್ಪಣೆ ಹೊರಡಿಸುತ್ತಾಳೆ
ಹೂಗಳು ನಗುತ್ತವೆ
ಹಟದ ಪರದೆಯ
ಹಿಂದಿನ ಪ್ರೀತಿಯ ಕಂಡು

ಇರುವ ಉಸಾಬರಿಯಲ್ಲಿ
ಹೊತ್ತ ಜವಬ್ದಾರಿಯಲ್ಲಿ
ಅವಳದೊಂದು ಮೊಗ
ಕಂಡೊಂಡನೆ ಸಮಾಧಾನದ
ಅಲೆ ಎಬ್ಬಿಸುತ್ತಾ
ಪ್ರಪುಲ್ಲತೆಯ ಆಸ್ವಾದಕ್ಕೆ
ವಿರಾಮ ದೊರಕಿತೆ
ಎಂದು ಕೊರಗುತ್ತಾನೆ

ಇವನು ಹೆಗಲಿಗೆ
ಒರಗಲು ಪರಿಪರಿ
ಬೇಡುತ್ತಾನೆ
ರಾಜಿಯೆಂಬುದು
ಶಾಶ್ವತ ಪರಿಹಾರ
ತಬ್ಬುವಿಕೆಯ ಸಮಾಧಾನಕ್ಕೆ
ಉತ್ತರ ನೀಡುವಂತೆ ಕಾಯುತ್ತಾನೆ

ನಾ ಸುಲಭವಾಗಿ
ಸಿಗುವುದೇ ನಿನಗೆ
ಉದಾಸೀನತೆ
ಎಲ್ಲಿ ಹೋಗುವಳು ಬಿಡು
ಎಂಬ ದಿವ್ಯ ನಿರ್ಲಕ್ಷ್ಯ
ಎಂಬಿತಿದ್ಯಾದಿ ಕಟ್ಟಳೆಗಳನ್ನು
ವಿಧಿಸಿಕೊಂಡು ಕಣ್ಣೀರಿಗೆ
ಜಾರುತ್ತಾಳೆ

ಅಲೆಗಳೆಂದಾರೂ
ಭೇಟಿ ನಿಲ್ಲಿಸುವುದೇ
ಅಬ್ಬರವೂ ಕಡಿಮೆಯಾದರೂ?
ಎಂಬುದು ಅವಳಿಗಿನ್ನು
ಅರ್ಥವಾಗಿಲ್ಲ!


-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
—–