ಅನುದಿನ ಕವನ-೧೬೭೧, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ಕವನದ ಶೀರ್ಷಿಕೆ: ಶ್ರಾವಣದ ನಡುವೆ

ಶ್ರಾವಣದ ನಡುವೆ

ಮಸಿ ಮೆತ್ತಿದಾಕಾಶ,ಕೆಳಗೆ ಜಲಮಯ ಭೂಮಿ
ನಡುವೆ ಒಂದಾಗಿಸುವ ಮಂಜು ಪರದೆ
ಕಪ್ಪುಗಟ್ಟಿದ ಹಸಿರು ಮುಖವೆಲ್ಲ ಆಗಸಕೆ
ತಳದಲ್ಲಿ ಮುಲುಗುಡುವ ಜೀವಜಾತ್ರೆ.

ಬಾನಲ್ಲಿ ಕಾತರದ ಮಿಂಚು ಮೋಡದ ಆಚೆ
ಧಡಧಡಿಸುವೆದೆ ಗುಡುಗು,ಅಶ್ರು ಬಿಂದು
ಮರಗಳಿಗೊ ಈಗ ಬೇರಿನ ಚಿಂತೆ,ಈ ಮಣ್ಣ
ಸಂಗ ತೊರೆಯುವ ಭಯದ ಕೆಟ್ಟ ಕನಸು.

ಮಂಜು ಮರೆಯಲಿ ಹಾದು ಹೋಗುತ್ತಾವೆ ಅಸ್ಪಷ್ಟ
ಚೆಹರೆಯನು ಹೊತ್ತ ಮುಖಗಳು ಅನೇಕ
ಆ ಮುಖಗಳಲ್ಲಿ ಹೊಳೆವಂಥ ಭಾವಗಳೇನು
ಮಡುಗಟ್ಟಿ ನಿಂತ ಒಳ ತುಡಿತವೇನು?

ಅಷ್ಟೊಂದು ಭಾವಗಳ ಮೆರೆವಣಿಗೆ ನಡುವೆಯೂ
ಹೊಳೆಯುವುದು ಯಂತ್ರಸಮ ನಿರ್ಭಾವವೇ.
ಒಂದೊಂದೆ ಮುಖವಾಡ ಕಳಚಿ ಬಿದ್ದಾಗಲೂ
ಕೊನೆಗೂ ಉಳಿಯುವುದೇನು?-ನಿಗೂಢವೇ?

ಎಲ್ಲವೂ ಅಸ್ಪಷ್ಟ-ಇರುವುದಕೆ ಬೇರೆಲ್ಲಿ?
ಮಂಜು ಮುಖವಾಡಗಳ ಗೋಜಲಲ್ಲಿ
ಆಳದಲಿ ಕುದಿವಬ್ಬಿ,ಗಗನವೋ ನಾಪತ್ತೆ
ಸತ್ತೆ-ದುಡಿಯುವ ಜೀವಜಾತಕೆಲ್ಲಿ?

ಕೇಳುವುದು ಭೋರಿಡುವ ನೂರು ಸ್ವರಗಳು,ನಡುವೆ
ನಮ್ಮದೇ ಸ್ವರ ಎಲ್ಲಿ ಹೋಯ್ತು ಜಾರಿ?
ನೆಲೆಯಿಲ್ಲದಲೆವ ಗುರಿ,ಆಸೆ ಮಾಗುವ ಹಾಗೆ
ಸಹಜ ಅನುಸಂಧಾನಕೆಲ್ಲಿ ದಾರಿ?

ಶ್ರಾವಣಕೆ ಏಕಿಂಥ ರೂಪ?ಕಾವಳದಲ್ಲಿ
ಕುದಿವೊಳಲ ತಳವೇಕೆ?ಎಲ್ಲಿ ಪಾರ?
ಆಚೆ ದಾಟುವುದಕ್ಕೆ ಕಾತರದಿ ಕಾದವಗೆ
ಕಾರ್ತೀಕದ ದೀಪಕ್ಕೆ ಎಷ್ಟು ದೂರ?

-ಸುಬ್ರಾಯ ಚೊಕ್ಕಾಡಿ, ಸುಳ್ಯ
—–