ಬಾಗಲಕೋಟೆ, ಆ. 8: ಮಂಕುತಿಮ್ಮನ ಕಗ್ಗವು ಪ್ರಸ್ತುತ ದಿನಗಳಲ್ಲಿ ಮಾನವನ ಜೀವನ ಮತ್ತು ಆದರ್ಶಗಳ ಗಣಿಯಾಗಿದೆ ಅಲ್ಲದೆ ಇದು ಮನುಷ್ಯನ ಬದುಕಿನ ಚಿತ್ರಣವನ್ನು ಹಾಗೂ ಮನುಷ್ಯ ಹೇಗೆ ಬದುಕಬೇಕು ಎಂಬ ಚಿಂತನೆಯನ್ನು ತಿಳಿಸುತ್ತದೆ ಎಂದು
ಪ್ರಾಧ್ಯಾಪಕರು ಹಾಗೂ ಚಿಂತಕರಾದ ಪ್ರೊ ವಿ ಆರ್ ಪರಡ್ಡಿ ಅವರು ತಿಳಿಸಿದರು.
ಅವರು ಶುಕ್ರವಾರ ಇಲ್ಲಿನ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಐ ಕ್ಯೂ ಏ ಸಿ ವಿಭಾಗದ ಆಶ್ರಯದಲ್ಲಿ ಏರ್ಪಡಿಸಿದ್ದ ಮಂಕುತಿಮ್ಮನ ಕಗ್ಗ ವಾಚನ ಮತ್ತು ವ್ಯಾಖ್ಯಾನ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪರಿಸರದಲ್ಲಿರುವ ಎಲ್ಲಾ ಪ್ರಾಣಿ ಪಕ್ಷಿಗಳು ಮೌನದಿಂದ ತಮ್ಮ ಕಾರ್ಯವನ್ನು ಹಾಗೂ ಕೆಲಸವನ್ನು ಮಾಡಿ ಮುಗಿಸುತ್ತವೆ. ಆದರೆ ಮನುಷ್ಯ ಮಾತ್ರ ಮೌನವನ್ನು ಮುರಿದು ಮಾತಿನ ಮೂಲಕ ಜೀವನವನ್ನು ಸಾಗಿಸುವ ಪ್ರಯತ್ನ ಮಾಡುತ್ತಾನೆ ಈ ವಿಚಾರವು ಕಗ್ಗದಲ್ಲಿ ಪ್ರಮುಖವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಪ್ರೊ ಎಸ್ ಆರ್ ಮೂಗನೂರು ಮಠ ಅವರು ಮಾತನಾಡಿ, ಡಿ ವಿ ಗುಂಡಪ್ಪನವರು ಓದಿದ್ದು ಕೇವಲ ಎಸ್ ಎಸ್ ಎಲ್ ಸಿ. ಆದರೆ “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ತಿಮ್ಮನ ಕಗ್ಗ” ಎಂಬ ಎರಡು ವಿಶೇಷ ಗ್ರಂಥಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಕ್ಯೂ ಏ ಸಿ ಸಂಯೋಜಕರಾದ ಡಾ.ಅಪ್ಪು ರಾಥೋಡ್ ಅವರು ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಎಸ್ ಡಿ ಕೆಂಗಲಗುತ್ತಿ ಅವರು ಸ್ವಾಗತಿಸಿದರು ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಎನ್ ಬಿ ವಿರುಪಾಕ್ಷಿ ಅವರು ವಂದಿಸಿದರು.