ಅನುದಿನ ಕವನ-೧೬೯೪, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ:ಅತೀತ‌ ಆಂತರ್ಯ

ಅತೀತ‌ ಆಂತರ್ಯ

ಪ್ರೀತಿ…
ದೇಹಾತೀತ ಎಂದು ಭಾವಿಸಿದ್ದೆ!!
ನಿನ್ನ ಕೈಬೆರಳು ಸೋಕಲು ಚಡಪಡಿಸುವ
ಈ ಕಾಯವ ಕಂಡು ದಿಗ್ಭ್ರಾಂತಳಾದೆ!

ಪ್ರೀತಿ..
ನಿರಾಕರಣವೆಂದು ಭಾವಿಸಿದ್ದೆ!
ನಿನ್ನ ಸಾಮಿಪ್ಯದಿ ಪುಟಿದೇಳುವ
ಕಾಮನೆಗಳು ಅರಿವಿಗೆ ಬಂದು ಬೆಪ್ಪಳಾದೆ!!

ಪ್ರೀತಿ…
ಕಾಲವನ್ನು ಮೀರಿದ್ದು ಎಂದು ಭಾವಿಸಿದ್ದೆ!
ನಿನ್ನ ಅರೆಕ್ಷಣದ ಅನುಪಸ್ಥಿತಿಯಲ್ಲೂ ಹೃದಯ ಬೆಚ್ಚಿಬೀಳಲು ಉಸಿರಿಲ್ಲದ ಉಸಿರ ಕೆಸರಲ್ಲಿ ಹೂತುಹೋದೆ!!

ಪ್ರೀತಿ..
ಸಹಜವೆಂದು ಭಾವಿಸಿದ್ದೆ!
ನಿನ್ನೊಂದಿಗೆ ಬಾಳುವ
ಅನುರಾಗದ ಅನಿವಾರ್ಯದಲ್ಲಿ
ಹುಟ್ಟಿದೆಯೇನೋ ಎನಿಸಿ ಕುಬ್ಜಳಾದೆ!!

ಪ್ರೀತಿ ಎಂದರೆ ಏನೆಲ್ಲವೂ ಹೌದು!
ಏನೆಲ್ಲವೂ ಅಲ್ಲ!!
ಗ್ರಹಿಕೆಗೆ ನಿಲುಕಿದ್ದು…
ಗ್ರಹಿಕೆಗೆ ನಿಲುಕಲಾರದ್ದು!
ಅನುಭವಕ್ಕೆ ಬಂದದ್ದೂ..
ಅನುಭವಕ್ಕೆ ಬರದಿದ್ದದ್ದು!!
ಒಂದರೊಳಗೊಂದು ಬೆಸೆದು…
ನವಭಾವದ ನವಜೀವ ಹುಟ್ಟಿದ್ದು!
ಹುಟ್ಟದ್ದೂ!!

ನಿಜವೆಂದರೆ..!
ಅಂತಹ ನರಳಿಕೆಯಲ್ಲೂ ಹಿಂದಿನಿಂದ ಬಂದು ಯಾರೇ ಕಣ್ಮುಚ್ಚಿದರೂ ನಿನ್ನ ಒಲವ ತುಂಟತನ ಬಲ್ಲ ಮನ
ನಿನ್ನ ಹೆಸರೇ ಉಸುರುತ್ತದೆ.!!!!

ಇಂತಿ ನಿನ್ನೊಲವು.

-ಶಾಂತಾ ಪಾಟೀಲ್, ಸಿಂಧನೂರು
—–