“ಇದು ನಮ್ಮ ನಿಮ್ಮದೇ ಜೀವ-ಜೀವನದ ವಿಚಿತ್ರ ತಲ್ಲಣಗಳ ಕವಿತೆ. ಎಂದೆಂದಿಗೂ ಅರ್ಥವೇ ಆಗದ ವಿಸ್ಮಯ ಸಂವೇದನೆಗಳ ನಿತ್ಯ ಸತ್ಯ ಭಾವಗೀತೆ. ಇದು ನಮ್ಮೆಲ್ಲರ ಅನುದಿನದ ಲೋಕಾನುಭವವೂ ಹೌದು. ಅನುಕ್ಷಣದ ಸ್ವಾನುಭವವೂ ಹೌದು. ಇದು ಯುಗಯುಗದಿಂದ ಬದಲಾಗದ ಜಗದ ಮನಸ್ಥಿತಿಯೂ ಹೌದು. ಹೀಗೇಕೆಂದು ಉತ್ತರ ಸಿಗದ ಮನುಕುಲದ ಯಕ್ಷಪ್ರಶ್ನೆಯೂ ಹೌದು. ಏನಂತೀರಾ..?” -ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ವಿಸ್ಮಯ ವೃತ್ತಾಂತ.!
ಪ್ರೀತಿಸಿದವರಿಗಿಂತ
ವಂಚಿಸಿದವರನ್ನೇ
ಹೆಚ್ಚು ನೆನೆಯುತ್ತೇವೆ.!
ಉಪಕರಿಸಿದವರಿಗಿಂತ
ಅಪಕರಿಸಿದವರನ್ನೇ
ಹೆಚ್ಚು ಸ್ಮರಿಸುತ್ತೇವೆ.!
ಬೇಕಾಗಿರುವುದಕಿಂತ
ಬೇಡದಿರುವುದಕ್ಕೆ
ಹೆಚ್ಚು ನೋಯುತ್ತೇವೆ.!
ಬಂದವರಿಗಿಂತಲೂ
ಬಾರದಿರುವವನ್ನೇ
ಹೆಚ್ಚು ಕೇಳುತ್ತೇವೆ.!
ಪಡೆದುದಕ್ಕಿಂತಲೂ
ಕಳೆದುಕೊಂಡುದದಕ್ಕೇ
ಹೆಚ್ಚು ಚಿಂತಿಸುತ್ತೇವೆ.!
ಕೈಹಿಡಿದವರಿಗಿಂತ
ಕಾಲೆಳೆದವರನ್ನೇ
ಹೆಚ್ಚು ಜಪಿಸುತ್ತೇವೆ.!
ಆರಾಧಿಸುವವರಿಗಿಂತ
ನಿಂದಿಸುವವರನ್ನೇ
ಹೆಚ್ಚು ಆದರಿಸುತ್ತೇವೆ.!
ಅಕ್ಕಪಕ್ಕದವರಿಗಿಂತ
ದೂರಭಾರದವರನ್ನೇ
ಹೆಚ್ಚು ಆಶಿಸುತ್ತೇವೆ.!
ಇರುವುದಕ್ಕಿಂತಲೂ
ಇಲ್ಲದಿರುವುದಕ್ಕೆಯೇ
ಹೆಚ್ಚು ಕೊರಗುತ್ತೇವೆ.!
ಬದುಕಿನ ಬಗೆಗಿಂತ
ಸಾವಿನ ಕುರಿತೇ
ಬೆದರಿ ಬಳಲುತ್ತೇವೆ.!

-ಎ.ಎನ್.ರಮೆಶ್, ಗುಬ್ಬಿ.
