ಅನುದಿನ ಕವನ-೧೭೦೬, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಬೆಳಕು…!

“ಇದು ನಮ್ಮ-ನಿಮ್ಮದೇ ಅಂತರಂಗದ ಬೆಳಕಿನ ಅನಾವರಣದ ಕವಿತೆ. ಬದುಕು ಬೆಳಗುತ ಮಾರ್ದನಿಸುವ ಜ್ಯೋತಿ ರಿಂಗಣಗಳ ನಿತ್ಯ ಸತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನ ತತ್ವಗಳ ಸಾರವಿದೆ. ಅರಿತಷ್ಟೂ ಸತ್ಯ ಸತ್ವಗಳ ವಿಸ್ತಾರವಿದೆ. ಹೆಚ್ಚೇನೂ ಪೀಠಿಕೆ ಬೇಡದ ಕವಿತೆಯಿದು. ಏಕೆಂದರೆ ನಮ್ಮೊಳಗಿನ ಚಿರಂತನ ಜೀವಸಂವೇದನೆಗಳ ಚಿರಚಿರಂತನ ಬೆಳಕಾಗಿಸುವ ಭಾವಪ್ರಣತೆಯಿದು. ಏನಂತೀರಾ..?”
-ಪ್ರೀತಿಯಿಂದ ಎ.ಎನ್.ರಮೇಶ್ ಗುಬ್ಬಿ.

ಬೆಳಕು..!

ಪರಿಹಾರ ಬೇಕಿರುವುದು…
ಜಗದ ಜಂಜಡಗಳಿಗಲ್ಲ.
ಮನದ ಗೊಂದಲಗಳಿಗೆ.!

ಸರಿಪಡಿಸಬೇಕಿರುವುದು…
ಹೊರಗಿನ ಕ್ಲೇಶಗಳನಲ್ಲ..!
ಒಳಗಿನ ದೋಷಗಳನ್ನು.!

ತಿದ್ದಿ ತೀಡಬೇಕಿರುವುದು..
ಲೋಕದ ಕೊರತೆಗಳನಲ್ಲ
ಮನದ ನ್ಯೂನತೆಗಳನ್ನು.!

ಬೆಳಕು ಬೇಕಿರುವುದು…
ಹೊರಗಿನ ಅಂಧಕಾರಕಲ್ಲ
ಒಳಗಿನ ವಿಕಾರಗಳಿಗೆ.!

ಒಳಗೆ ಪಾಪಿಯುಂಟು
ಪರಮಾತ್ಮನೂ ಉಂಟು.!
ಸಾಧು-ಸೈತಾನರುಂಟು.!

ಜಗದ ಮಾಯೆಯಿದು.!
ಬದುಕಿನ ವೈರುಧ್ಯವಿದು.!
ಜೀವದ ವಿಸ್ಮಯವಿದು.!

ಸಶಕ್ತವಾಗಬೇಕಾದರೆ
ಬಹಿರಂಗದ ಪಾತ್ರ..
ಬಾಹ್ಯಬದುಕಿನ ಗಾತ್ರ..

ಸುಭದ್ರವಿರಲೇಬೇಕು
ಆಂತರ್ಯದ ಸೂತ್ರ.!
ಅಂತರಂಗದ ನೇತ್ರ.!

ಸ್ಪಷ್ಟವಾದಾಗ ದೃಷ್ಠಿ
ಸಹ್ಯವಾದೀತು ಸೃಷ್ಟಿ
ಸಾಧ್ಯವಾದೀತು ಸಮಷ್ಠಿ.!

ಅರಿವಿಂದ ಬೆಳಗಿದಾಗ
ಅಂತಃಕರಣದ ದೀಪ್ತಿ
ಬೆಳಕಾದೀತು ಬಾಳವ್ಯಾಪ್ತಿ.!


-ಎ.ಎನ್.ರಮೇಶ್, ಗುಬ್ಬಿ.
—–