ಅವಳು
ಬದುಕನ್ನು ದ್ವೇಷಿಸುವಷ್ಟೇ
ಸಲೀಸಾಗಿ ಪ್ರೀತಿಸುತ್ತಾಳೆ..
ನಡುರಾತ್ರಿಯೋ ನಸುಕೋ
ತಿಳಿಯದ ಹೊತ್ತಲ್ಲಿ
ಗೋಡೆಗೊರಗಿ ಕೂತಾಗ
ಬದುಕು ನಾಭಿಯಿಂದ ಉಕ್ಕಿ ಬಂದು
ಗಂಟಲಲ್ಲಿ ಕೂತುಬಿಡುತ್ತದೆ..
ದ್ವೇಷಿಸುತ್ತಾಳೆ ಬದುಕನ್ನು
ಹಿಂದೆಂದಿಗಿಂತ ಹೆಚ್ಚಾಗಿ
ಉಗುಳಲೂ, ನುಂಗಲೂ ಆಗದಂತೆ.
ಹಸಿದು ಹೆಜ್ಜೆ ಕುಸಿದ ಹೊತ್ತಿಗೆ
ಬಡಿಸುತ್ತದೆ ಬದುಕು
ಬೊಗಸೆ ತುಂಬ..
ನೀಡುತ್ತದೆ ಅವಳು ಕೇಳಿದ್ದನ್ನೆಲ್ಲ
ತೊಟ್ಟು ತೊಟ್ಟಾಗಿ
ಬೊಗಸೆಯಿಂದ ಜಾರದಿರುವ ಹಾಗೆ.
ಪ್ರೀತಿಸುತ್ತಾಳೆ ಬದುಕು ನೀಡಿದ
ಒಂದೊಂದು ತೊಟ್ಟನ್ನೂ
ಹೀರುತ್ತಾಳೆ ಜನುಮಗಳಿಂದ
ಕಾಪಿಟ್ಟ ದಾಹದಿಂದ.
ತುಂಟಿಯಂಚಲ್ಲಿ ಉಳಿದ
ಪಸೆಯನ್ನೂ ಮತ್ತೆ ಒರೆಸಿಕೊಂಡು
ತೃಪ್ತಿಯ ನಗು ಬೀರುತ್ತಾಳೆ.
ದ್ವೇಷಿಸುತ್ತಾಳೆ ಮತ್ತದೇ ಬದುಕನ್ನು..
ಬೊಗಸೆ ತುಂಬಿದ್ದಕ್ಕೆ.
ತೊಟ್ಟು ತೊಟ್ಟಾಗಿ ನೀಡಿದ್ದಕ್ಕೆ
ಬೊಗಸೆಯೊಡ್ಡುವಂತೆ
ಮಾಡಿದ್ದಕ್ಕೆ.
ಅವಳು..
ಬದುಕು ನೀಡಿದ್ದನ್ನು
ಪ್ರೀತಿಸಿದಷ್ಟೇ ಸಲೀಸಾಗಿ
ಬದುಕನ್ನು ದ್ವೇಷಿಸುತ್ತಾಳೆ..
-ಸಮುದ್ಯತಾ ಕಂಜರ್ಪಣೆ, ಬೆಂಗಳೂರು