ಗಜಲ್
ಕಣ್ಣೊಳಗಿನ ಬೆಳಕು ಆರಿಹೋಗುತಿದೆ ಬಂದುಬಿಡು
ಬದುಕಿನ ಪಾತ್ರೆಯೆಲ್ಲ ಬರಿದಾಗುತಿದೆ ಬಂದುಬಿಡು
ನಿನ್ನ ನಿರೀಕ್ಷೆಯಲಿ ಮೊಂಬತ್ತಿಯೂ ಕುಗ್ಗಿಹೋಗಿದೆ
ಹರಣ ದೀಪವು ನಿಶೆಯೊಳಗೆ ಕರಗುತಿದೆ ಬಂದುಬಿಡು
ಮಧುಬಟ್ಟಲ ಪ್ರತಿ ಗುಟುಕೂ ಕಂಬನಿ ಮಿಡಿಯುತಿದೆ
ಒಲವಿನ ಎದೆ ಬಡಿತವು ಮಂದವಾಗುತಿದೆ ಬಂದುಬಿಡು
ಮನಸುಗಳು ಒಂದಾದರೂ ಅಗಲುವಿಕೆಯಲೇ ಉಳಿದವು
ಪರದೇಶಿಯಾದ ಬದುಕು ಬರಡಾಗುತಿದೆ ಬಂದುಬಿಡು
ಇಳೆ ಬಾನು ಸಕಲವೆಲ್ಲ ಕಾಣೆಯಾಗುತಿದೆ ಸಿದ್ಧನೊಳಗೆ
ನಿನಗಾಗಿ ಕಾದು ನಿಂತ ನೆಲವೆ ಕುಸಿಯುತಿದೆ ಬಂದುಬಿಡು
-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ.