ನಿನ್ನ ಪ್ರೀತಿ ಕೊನೆಯಾಗದು…
ಆದಷ್ಟು ಗಾಢ ಮೌನವಾಗಿಯೆ ನಿನ್ನ ಪ್ರೀತಿಸಿದೆ;
ಮೌನದ ಪ್ರೀತಿಗೆ
ನಿನ್ನ ನಿರಾಕರಣೆ ಅರ್ಥವಾಗದು!
ಬಹಳಷ್ಟು ಒಬ್ಬಂಟಿಯಾಗಿಯೆ ನಿನ್ನ ಪ್ರೀತಿಸಿದೆ;
ಒಂಟಿತನದ ಆಪ್ತತೆಗೆ
ನಿನ್ನ ತಿರಸ್ಕಾರದ ಅಪಸ್ವರ ಕೇಳಿಸದು!
ಅದೆಷ್ಟು ದೂರದಿಂದಲೇ ನಿನ್ನೊಲವ ಆರಾಧಿಸಿದೆ;
ದೂರದಿ ನನ್ನ ವಿರಹದ ವಿಹ್ವಲತೆ
ನಿನಗೆಂದೆಂದೂ ತಾಗಿ ಬಾಧಿಸದು!
ಭಾವ ತುಂಬಿ ಹಾಡುಗಳಲ್ಲಿಯೆ ನಿನ್ನ ನಂಬಿಕೊಂಡೆ;
ಹಾಡಿಗೆ ನಿನ್ನೆಲ್ಲ ಸೊಗಸಿನ
ದ್ವೇಷ ಮತ್ಸರ ಅಹಂ ಅರಿವಾಗದು!
ಈ ಗಾಳಿಯಲ್ಲಿಯೇ ನಿನ್ನ ಬಳಸಿ ಆಲಂಗಿಸಿದೆ;
ಗಾಳಿಯೆಂದು ನಿನ್ನಷ್ಟು
ಒರಟಾಗಿ ಬಡಿದು ಸಿಡಿದು ತಿರಸ್ಕರಿಸದು!
ಕ್ಷಣಕ್ಷಣ ಕನಸಿನಲ್ಲಿಯೇ ನಿನ್ನನ್ನೆ ಹಿಡಿದಿಟ್ಟುಕೊಂಡೆ;
ನನ್ನ ಕನಸುಗಳ ಮಧುರ ಪ್ರೀತಿ
ಇನ್ನು ಯಾವತ್ತು ಕೊನೆಯಾಗದು!
-ಟಿ.ಪಿ.ಉಮೇಶ್, ಹೊಳಲ್ಕೆರೆ