ಬಳ್ಳಾರಿ,ಸೆ.22: ಪ್ರಸಕ್ತ ಸಾಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಆರಂಭವಾಗಿ ಎರಡು ತಿಂಗಳಾಗುತ್ತಾ ಬಂದರೂ ಅತಿಥಿ ಉಪನ್ಯಾಸಕರ ನೇಮಕ ವಿಳಂಬವಾಗುತ್ತಿರುವುದು ವಿದ್ಯಾರ್ಥಿಗಳಿಗೆ ಮಾರಕವಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷರೂ ಆಗಿರುವ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ.ಟಿ.ದುರುಗಪ್ಪ ಟೀಕಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಬಳ್ಳಾರಿ ಜಿಲ್ಲಾ ಘಟಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಸುಮಾರು 432 ಸರ್ಕಾರಿ ಪ್ರಥಮ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರು 3000, ಅತಿಥಿ ಉಪನ್ಯಾಸಕರು ಸುಮಾರು 10500 ಇದ್ದು, ಇದರಲ್ಲಿ ಯುಜಿಸಿ ಅರ್ಹತೆ ಪಡೆದವರು 5000 ಮತ್ತು 6000 ಯುಜಿಸಿ ಅರ್ಹತೆ ಇಲ್ಲದವರು ಇದ್ದಾರೆ. ರಾಜ್ಯದಲ್ಲಿ ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ಒಡೆದು ಆಳುವ ನೀತಿಯನ್ನು ರಾಜ್ಯ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಯುಜಿಸಿ ಆರ್ಹತೆ ಹೊಂದಿದ ಕೆಲವರು ತಮ್ಮನ್ನು ಅತಿಥಿ ಉಪನ್ಯಾಸಕ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವಂತೆ ಹೈಕೋರ್ಟ್‌ನಲ್ಲಿ ಉನ್ನತ ಶಿಕ್ಷಣ ಇಲಾಖೆಯ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಯುಜಿಸಿ ನಿಗದಿಪಡಿಸಿದ ಮಾನದಂಡಗಳಂತೆ ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಪೀಠದ ದ್ವಿದಸ್ಯ ಪೀಠ ಮತ್ತು ಏಕಸದಸ್ಯ ಪೀಠವು ಯುಜಿಸಿ ಮಾನದಂಡದಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಂತೆ ಮಧ್ಯಂತರ ಆದೇಶವನ್ನು ನೀಡಿವೆ ಎಂದು ಹೇಳಿದರು.
ಆದರೆ ಇದೇ ಸೆ. 5 ರಂದು ಜರುಗಿದ ಶಿಕ್ಷಕರ ದಿನಾಚರಣೆಯ ರಾಜ್ಯಮಟ್ಟದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಹೈಕೋರ್ಟ್ ಪೀಠದಲ್ಲಿ ಯುಜಿಸಿ / ನಾನ್ ಯುಜಿಸಿ ಎಂಬ ಸಮಸ್ಯೆ ಇದೆ. ಇದು ಗೊಂದಲವಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಪ್ರವಚನವಿಲ್ಲದೆ ತೊಂದರೆಯಾಗಿದೆ’ ಎಂಬ ವಿಷಯ ಗೊತ್ತಿದೆ. ಸೆ. 9 ರಂದು ಬರುವ ದ್ವಿಸದಸ್ಯ ಪೀಠದ ತೀರ್ಪಿನ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ಆದರೆ ತೀರ್ಪು ಬಂದು 13 ದಿನ ಕಳೆದಿದ್ದರೂ ಉನ್ನತ ಶಿಕ್ಷಣ ಸಚಿವರು ಯಾವುದೇ ತೀರ್ಮಾನವನ್ನು ಕೈಗೊಳ್ಳದೇ ಮೌನ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಡಾ. ದುರುಗಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇದರ ಪರಿಣಾಮ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲದೆ ಲಕ್ವ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು, ಪಾಠ ಪ್ರಚವನಗಳು ನಡೆಯದೆ ಕುಂಠಿತಗೊಂಡಿವೆ. ಅತಿಥಿ ಉಪನ್ಯಾಸರಿಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಇತ್ತ ಖಾಸಗಿ ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆಯಲು ಅವರಲ್ಲಿ ಹಣಕಾಸಿನ ಕೊರತೆ ಇದೆ. ಪ್ರಸ್ತುತ ಖಾಸಗಿ ಕಾಲೇಜುಗಳಲ್ಲಿ ಮಾತ್ರ ಪಾಠ ಪ್ರವಚನಗಳು ನಡೆಯುತ್ತಿವೆ. ಇನ್ನೊಂದು ತಿಂಗಳಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು ಸೆಮಿಸ್ಟರ್ ಪರೀಕ್ಷೆಯನ್ನು ಘೋಷಣೆ ಮಾಡಲಿದ್ದು, ಇಲ್ಲಿ ಬರೀ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳೇ ಅಂಕಗಳನ್ನು ಪಡೆದು ಮೇಲುಗೈ ಸಾಧಿಸಲಿದ್ದಾರೆ ಎಂದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಬೋಧನೆಯಿಲ್ಲದೆ ಕಡಿಮೆ ಅಂಕಗಳನ್ನು ಪಡೆಯುವುದು ಅಥವಾ ಫೇಲ್ ಆದರೂ ಆಗಬಹುದು. ಈ ರೀತಿಯ ಶೈಕ್ಷಣಿಕ ಗುಣಮಟ್ಟಕ್ಕೆ ಒಡೆತ ಬೀಳಲು ಸಂಪೂರ್ಣವಾಗಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರೇ ನೇರ ಕಾರಣರಾಗುತ್ತಾರೆ ಎಂದು ದೂರಿದರು.
ರಾಜ್ಯದ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ಶಾಸಕರಾಗಲಿ, ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಹೋದ ವಿಧಾನ ಪರಿಷತ್ ಸದಸ್ಯರಾಗಲಿ ಚಕಾರವೆತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಗೆ ಆಯಾ ಭಾಗದ ಶಾಸಕರೇ ಅಧ್ಯಕ್ಷರಿರುತ್ತಾರೆ. ಆದರೆ ಆ ಶಾಸಕರ್ಯಾರು ಈ ಬಗ್ಗೆ ಗಮನಹರಿಸದೆ ಇರುವುದು ಅವರ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದರು.
ಇನ್ನೊಂದು ಹಂತದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ಗ್ರಾಮೀಣ ಬಡವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಎ.ಐ.ಡಿ.ಎಸ್.ಒ. ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳ ಪರವಾಗಿ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರುಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯ ಮಾಡಿದ್ದರೂ ರಾಜ್ಯ ಸರ್ಕಾರವು ತಲೆಕೆಡಿಸಿಕೊಳ್ಳದೇ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುವ ಪ್ರಕ್ರಿಯೆಗೆ ಮುಂದಾಗುತ್ತಿಲ್ಲ ಎಂದು ತಿಳಿಸಿದರು.
ರಾಜ್ಯ ಸರಕಾರದ ಉನ್ನತ ಶಿಕ್ಷಣ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗನೆ ಸಮರೋಪಾದಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕವನ್ನು ಮಾಡಿಕೊಳ್ಳಬೇಕು. ಯುಜಿಸಿ/ ನಾನ್ ಯುಜಿಸಿ ಎಂದು ಭೇದ ಭಾವ ಮಾಡದೆ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಡಿಮೆ ಗೌರವಧನಕ್ಕೆ ಬೋಧನೆ ಮಾಡಿದ ಅನುಭವೀ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಯಾವ ರಾಜ್ಯದಲ್ಲಿಯೂ ಇಲ್ಲದ ಯುಜಿಸಿ / ನಾನ್ ಯುಜಿಸಿ ಎಂಬ ಭೇದಭಾವ ಕರ್ನಾಟಕದಲ್ಲೇಕೆ? ಎಂದು ಪ್ರಶ್ನಿಸಿದ ಡಾ.ದುರುಗಪ್ಪ ಅವರು ಇಂತಹ ಯುಜಿಸಿ ನಿಯಮಗಳನ್ನು ಖಾಯಂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮಾಡಿಕೊಳ್ಳಲಿ. ಅದು ಬಿಟ್ಟು ಗುತ್ತಿಗೆ ಅಥವಾ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವಾಗ ಈ ನಿಯಮಗಳನ್ನು ಅನ್ವಯವಾಗಬಾರದು ಎಂದರು.
ರಾಜ್ಯ ಸರ್ಕಾರದ ಇಂತಹ ವಿಳಂಬ ನೀತಿ, ನಿರ್ಲಕ್ಷ್ಯ ಧೋರಣೆಗೆ ಅತಿಥಿ ಉಪನ್ಯಾಸಕರು ಆರ್ಥಿಕ ಸಂಕಷ್ಟ ಅನುಭವಿಸುತ್ತಾ ನಲುಗಿ ಹೋಗಿದ್ದಾರೆ. ಎರಡು ತಿಂಗಳಿನಿಂದ ಗೌರವಧನವಿಲ್ಲದೆ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ರೇಷನ್ ತರುವುದು. ವಯೋವೃದ್ಧರಾದ ತಂದೆ ತಾಯಿಗಳಿಗೆ ಚಿಕಿತ್ಸೆ ಕೊಡಿಸುವುದು, ಔಷಧಿ ತರುವುದು ಕಷ್ಟಕರವಾಗಿದೆ ಎಂದುಗಮನ ಸೆಳೆದರು.
ಸರಳಾದೇವಿ ಕಾಲೇಜಿನಲ್ಲೇ ಬೈಪಾಸ್ ಹಾರ್ಟ್ ಸರ್ಜರಿಗೆ ಒಳಗಾಗಿರುವ ಡಾ.ಕೆ.ಬಸಪ್ಪ ಅವರಿಗೆ ತಿಂಗಳಿಗೆ ಔಷಧಿಯ ಖರ್ಚು ಸುಮಾರು 8 ಸಾವಿರ ರೂಪಾಯಿಗಳಾಗುತ್ತದೆ. ಇದೇ ತರಹ ರಾಜ್ಯದಲ್ಲಿ ಆನೇಕ ಅತಿಥಿ ಉಪನ್ಯಾಸಕರು ಅನೇಕ ರೀತಿಯ ಆರ್ಥಿಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಮುಖಂಡರಾದ ಡಾ.ಹನುಮೇಶ ಜೋಳದರಾಶಿ., ಡಾ.ಕೆ.ಬಸಪ್ಪ, ರುದ್ರಮುನಿ, ಗೋವಿಂದ, ಮಾರಪ್ಪ ಎ.ಕೆ. ಎಂ.ರಫೀ, ಎಸ್.ಎಂ.ರಮೇಶ್, ಗುರುರಾಜ್, ಡಾ.ಗಂಗಾಧರ, ಶಂಕರ್, ಡಾ.ನಾಗಪ್ಪ ಬಿ.ಈ., ಶರಣಪ್ಪ, ವೀರೇಶ್, ಟಿ. ಜಯರಾಂ, ಡಾ.ದಸ್ತಗಿರಿ ಸಾಹೇಬು, ತೌಸಿಫ್ ಮುಂತಾದವರು ಭಾಗವಹಿಸಿದ್ದರು.