ಅನುದಿನ ಕವನ-೧೭೨೯, ಹಿರಿಯ ಕವಯತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ನೆರಳು

ನೆರಳು

ಹೆಜ್ಜೆ ಇಟ್ಟ ಕಡೆಗೆಲ್ಲ ನೆರಳು
ಅತ್ತ ಇತ್ತ ಅಲ್ಲಿ ಇಲ್ಲಿ ಎಲ್ಲಾ
ಬೆಂಬಿಡದ ನೆರಳು ಕಂಡು
ಅದೆಂಥದೋ ವ್ಯಾಮೋಹ
ಅದರೊಡಲ ನಿರ್ಭಾವುಕತೆಯ ಮೇಲೂ

ಒಮ್ಮೆ ಚಾಚುವುದು ಮುಂದೆ
ಇನ್ನೊಮ್ಮೆ ಹಿಂದೆ ಬೆಂಗಾವಲಿಗೆ
ಒಮ್ಮೆ ಆಕಡೆ ಒಮ್ಮೆ ಈಕಡೆ
ಒಮ್ಮೆ ಕಾಲಬುಡದಲ್ಲೇ ಅಡಗಿದಂತೆ
ಅದಕಿಲ್ಲ ಯಾವ ಏಚುಪೇಚು
ಅದೆಂಥ ಮೋಹವೋ ಕಾಣೆ
ಅದರೊಡಲ ನಿರ್ಭಾವುಕತೆಯ ಮೇಲೂ

ಗುರುತೇ ಸಿಗದಂತೆ ತೋರುವುದು
ಆಕಾರ ವಿಕಾರಗಳ ಅಷ್ಟಾವತಾರ
ಒಮ್ಮೆ ಇಷ್ಟಗಲ ಒಮ್ಮೆ ಸಪೂರ ಕೋಲು
ಒಮ್ಮೆ ಇಷ್ಟುದ್ದ ಒಮ್ಮೆ ಗೇಣುದ್ದ
ಗರಬಡಿದು ಗಾಬರಿಯಾದರೂ
ಅದೆಂಥ ಮೋಹವೋ ಕಾಣೆ
ಅದರೊಡಲ ನಿರ್ಭಾವುಕತೆಯ ಮೇಲೂ

ಭಾವನೆಗಳ ಏರಿಳಿವಿನಾಟ
ಜಂಜಾಟದಲಿ ಬಳಲಿ ಕುಗ್ಗಿದರೂ
ನೆರಳ ತೇಲಾಟ ಅದರದೇ ಲೋಕದಲಿ
ಒಂದಿಂಚೂ ಆಚೀಚೆ ಅಲುಗದೆ
ಬೆರೆಯಲೆ ನೆರಳ ನಿರ್ಭಾವುಕತೆಯಲಿ
ತೇಲುತಲೇ ಮೋಹ‌ವ್ಯಾಮೋಹದಲಿ
ಸಿಕ್ಕೀತು ಚಣ ಶಾಂತಿ ತಪ್ತಮನಕೆ


-ಸರೋಜಿನಿ ಪಡಸಲಗಿ
ಬೆಂಗಳೂರು