ಕಾಯುತಿದೆ ಜೀವ
ಪ್ರಶಾಂತ ರಮಣೀಯ ನಿತಾಂತ
ಇರುಳಿಗೆ ಕಣ್ಬಿಟ್ಟು ಕಾಯುತಿದೆ ಜೀವ
ನಸುಗಪ್ಪು ಕತ್ತಲಲಿ ಒರಗಿ ಕರಗಿ
ಬಾನಂಗಳದಿ ಹೆಣೆದ ನಕ್ಷೆಗಳ
ಕಂಗಳಲಿ ಬಚ್ಚಿಟ್ಟು ಜಾರದಂತೆ
ಕಾಪಿಡಲು ಕಣ್ಬಿಟ್ಟು ಕಾಯುತಿದೆ ಜೀವ
ಬೆಳ್ಳಿ ಬೆಟ್ಟನೇರಿ ತುಟ್ಟ ತುದಿಗೇರಿ
ಮೋಡ ಹೆಗಲೇರಿ ಚೆದುರಿದಂಥ
ಬಾಳ ಬುತ್ತಿಯ ಕಟ್ಟಿ ಸೋರದಂತೆ
ಕಾಪಿಡಲು ಕಣ್ಬಿಟ್ಟು ಕಾಯುತಿದೆ ಜೀವ
ಬಾಂದಳದ ಕಪ್ಪು ಕಾವಳದಿ ಚೆಲ್ಲಿ
ಮಿರುಗೊ ಕವಳಿಹಣ್ಣ ಸಾಲಲಿ
ಭದ್ರವಾಗಿಸಿ ಬದುಕಿನಾ ಸೊತ್ತನ
ನಿರುಮ್ಮಳಾಗಿ ಹೋಗಲು ಕಾಯುತಿದೆ ಜೀವ
ಕಾಲನ ಬಂಧಿಸಿ ನಿಶ್ಯಬ್ದ ಬಯಲಲಿ
ಒಂಟಿ ಇರುಳ ಒಂಟಿ ಬಾನಡಿಯಲ್ಲಿ
ಒಂಟಿ ಮರದ ನೆರಳಲ್ಲಿ ಒಂಟಿಯಾಗಿ
ಸೊಲ್ಲಿಲ್ಲದೆ ಕಳೆದು ಹೋಗ ಕಾಯುತಿದೆ ಜೀವ

-ಸರೋಜಿನಿ ಪಡಸಲಗಿ
ಬೆಂಗಳೂರು

-ಶಿವಶಂಕರ ಬಣಗಾರ, ಹೊಸಫೆಟೆ
