“ಇದು ಸಂತನಾಗುವ ಸತ್ಯ ಸಮೀಕರಣದ ಸಾತ್ವಿಕ ಕವಿತೆ. ಒಳಗಣ ಸತ್ವ, ಹೊರಗಣ ಮಹತ್ವ ಏಕೀಕರಣವಾಗುವ ತಾತ್ವಿಕ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವಿನ ಹರಿವಿದೆ. ಅರ್ಥೈಸಿದಷ್ಟೂ ಆಧ್ಯಾತ್ಮದ ಹರವಿದೆ. ಆತ್ಮೋನ್ನತಿಯ ಸಾರವಿದೆ. ಬೆಳಕ ನಿಯತಿಯ ವಿಸ್ತಾರವಿದೆ. ಓದಿದಷ್ಟೂ ನಿಮಗೆ ಖಂಡಿತಾ ಇಷ್ಟವಾಗುತ್ತದೆ. ಏಕೆಂದರೆ ಇದುವೆ ಜೀವ ಬೆಳಕಿನ ಮುಕ್ತಿ ಸಾನಿಧ್ಯ, ಭಾವ ಬೆಳದಿಂಗಳಿನ ಅಂತಿಮ ಗಮ್ಯ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಸಂತ..!
ಸಂತನಾಗುವುದೆಂದರೆ ಸಂತೆಯಲು
ತನ್ನೊಳಗೆ ತಾನೆ ಏಕಾಂತವಾಗುವುದು
ಜಾತ್ರೆ ಯಾತ್ರೆಗಳ ಗೌಜು ಗದ್ದಲದಲು
ಜಂಗುಳಿಯೊಳಗು ಜಂಗಮನಾಗುವುದು!
ಹೊರ-ಒಳಗಣ ಚಿಂತೆಗಳ ಚಿತೆಯಲ್ಲು
ಕೆಡದೆ ಸುಡದೆ ನಿತ್ಯ ನಿಶ್ಚಿಂತನಾಗುವುದು
ಮುತ್ತುವ ನೋವು-ನಲಿವ ಸುಳಿಯಲ್ಲೂ
ಬಾಗದೆ ಬೀಗದೆ ಸದಾ ನಿರ್ಲಿಪ್ತನಾಗುವುದು!
ನಂಟು ಗಂಟು ಕಗ್ಗಂಟು ಬಂಧನಗಳಲು
ಅಂಟಿ ಆತುಕೊಳ್ಳದೇ ಅತೀತನಾಗುವುದು
ದರ್ಪ ದರ್ಬಾರು ದಾಕ್ಷಿಣ್ಯಗಳ ಎದುರಲು
ದಾಸನಾಗದೆ ದೂರಾಗಿ ವಿನೀತನಾಗುವುದು!
ರಾಗ-ದ್ವೇಷಗಳ ಅಂಧಕಾರ ವಿಕಾರಗಳಲು
ಬಂಧಿಯಾಗದೆ ತ್ಯಜಿಸಿ ಅನಾಥನಾಗುವುದು
ವಂದನೆ ನಿಂದನೆ ಸನ್ಮಾನ ಅವಮಾನದಲು
ಏರದೆ ಜಾರದೆ ಸತ್ಯ ಸಮಚಿತ್ತನಾಗುವುದು!
ಗಳಿಕೆ ಕೂಡಿಕೆ ಹೂಡಿಕೆಗಳ ಪ್ರಭಾವದಲು
ಪೀಡಿತನಾಗದೆ ವರ್ಜಿಸಿ ಪರಿತ್ಯಕ್ತನಾಗುವುದು
ಬೇಡಿ ಬಂದವರೆದುರು ಕರ ಬಿಗಿಹಿಡಿಯದೆ
ಇದ್ದುದೆಲ್ಲವ ಕೊಡುತ ಪುನೀತನಾಗುವುದು!
ಬೇಕು ಬೇಕೆನುವ ಭಾವ-ಭಾಷ್ಯ ತೊರೆದು
ನಿರಾಳತೆ ನಿರ್ಮೋಹದಿ ವಿರಕ್ತನಾಗುವುದು
ಲೌಕಿಕ ಆಸೆ ಆಮಿಷ ವ್ಯಾಮೋಹ ತೊಳೆದು
ಅನುಭಾವಾನುಭೂತಿಗೆ ಅನುರಕ್ತನಾಗುವುದು!
ಬೋಧನೆ ಭ್ರಮೆ ಭ್ರಾಂತಿಗಳಲಿ ಬಸವಳಿಯದೆ
ಸಾಧನೆಯೆಡೆಗೆ ನಡೆದು ಕೃತಾರ್ಥನಾಗುವುದು
ಸದ್ವಿಚಾರ ಸತ್ಸಂಗ ಸನ್ಮಾರ್ಗಗಳಲಿ ಬೆಳಗುತ
ಸತ್ಯ ಸಂಸ್ಕಾರ ಸಾಕ್ಷೀಕರಿಸಿ ಸಾರ್ಥನಾಗುವುದು!
ಆಲಯ ಬಯಲು ಮೀರಿ ಬೆಳೆದು ಹೊಳೆದು
ಅರಿವ ಬೆಳಕಲಿ ಮಿಂದು ಮಹಂತನಾಗುವುದು
ಜೀವಾತ್ಮ ಪರಮಾತ್ಮರ ಅನುಸಂಧಾನ ಬೆಸೆದು
ಅಂತಿಮ ಸಾಕ್ಷಾತ್ಕಾರದಿ ಅನಂತನಾಗುವುದು!

-ಎ.ಎನ್.ರಮೇಶ್.ಗುಬ್ಬಿ.
