ಅನುದಿನ ಕವನ-೧೭೪೮, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ:ನಿನ್ನ ನೆನಪಾದಾಗ

ನಿನ್ನ ನೆನಪಾದಾಗ

ನಿನ್ನ ನೆನಪಾದಾಗ ಬಿರಿಯುತ್ತದಲ್ಲ ಎದೆ
ಅರಳುತ್ತದಲ್ಲ ಮುಗುಳ್ನಗು
ಪಕ್ಕದಲ್ಲೇ ಹೂ ಬೀಳುವ ನಿಶಬ್ದತೆಯೂ
ಉಸುರುತ್ತದೆ
ನಿನ್ನ ಹೆಸರಿನ ಪುಳಕ
ನಂತರ ಮಿಲನದ ನಡುಕ

ಮಳೆಯ ಮೊದಲ ಹನಿ ಬೀಳುವ
ಮುನ್ನದ ವಾಸನೆ ಯಾತರದು?
ನೀನು ಸರಿದಾಡಿದಾಗಿನ ನೆನಪು.
ಕಣ್ಣಿನ ತುದಿಯಲ್ಲಿ ನಿಂತ ಮಿಂಚಿನ ಹೊಳಪು

ನೀನು ಹತ್ತಿರವಿದ್ದ ಘಳಿಗೆ
ನನ್ನೊಳಗಿನ ಎಲ್ಲ ಹಕ್ಕಿಗಳೂ ಹಾಡಿದ್ದವು
ಆಮೇಲೆ ..?ಮೌನವೇ ಭೋರ್ಗರೆವ ಗೀತೆ

ನಿನ್ನ ಹೆಜ್ಜೆಯ ಶಬ್ದ ಇನ್ನೂ ನನ್ನಲ್ಲಿ
ಪಿಸುಗುಟ್ಟುತ್ತದೆ
ಆ ದಿನ ಬಿಡದೇ ಸುರಿದ
ಮಳೆಹನಿಯಂತೆ
ನಿನ್ನ ಅರೆಬಿರಿದನಗು,
ಆಡಿದ ಕೆಲವೇ ಮಾತು, ಹುಸಿಮುನಿಸು,
ಕಣ್ತಪ್ಪಿಸಿ ಸರಿದ ಕನಸು,
ಎಲ್ಲವೂ ನನ್ನ ಕವಿತೆಯೊಳಗೆ ಬೆರೆತಿವೆ.

ನಿನ್ನ ನೆನಪಾದಾಗ
ಬದುಕೇ ಪುನಃ ಬರೆದ ಕವನದಂತೆ
ಅರಳುತ್ತದೆ,
ನವಿರಾದ ನಡುಕದಲ್ಲಿ ಪ್ರೀತಿಯ
ಶಬ್ದ ಕೇಳಿಸುತ್ತದೆ
ಮಾತಿಲ್ಲದ ಪದವೊಂದು ನಿನ್ನ ಹೆಸರನ್ನು
ಉಸಿರಾಗಿಸುತ್ತದೆ.

-ಮಮತಾ ಅರಸೀಕೆರೆ
—-

Leave a Reply

Your email address will not be published. Required fields are marked *