ಅನುದಿನ ಕವನ-೧೭೫೯, ಕವಿ: ಎ.ಎನ್.ರಮೇಶ್. ಗುಬ್ಬಿ., ಕವನದ ಶೀರ್ಷಿಕೆ: ಪ್ರತೀಕ್ಷೆ..!

“ಇದು ಒಲವಿನ ಮೋಡಿ-ಗಾರುಡಿಯ ಲಾಸ್ಯ-ಲಹರಿಯ ಕವಿತೆ. ಪ್ರೇಮಸಂವೇದನೆಗಳ ಕಾವ್ಯ-ಭಾಷ್ಯಗಳ ಭಾವದಾಂಗುಡಿಯ ಅಕ್ಷರ ಪ್ರಣತೆ. ಪುಟ್ಟ ಪುಟ್ಟ ಪದಗಳ ಮೋದ-ಆಮೋದಗಳ ಮಧುರ ನಿನಾದದ ಜೀವಗೀತೆ. ಓದಿದಷ್ಟೂ ಪುಳಕಿಸಿ ಹೃನ್ಮನ ಝೇಂಕರಿಸುತ್ತದೆ. ಏಕೆಂದರೆ ಒಲವಿನ ಓಂಕಾರವೇ ಹಾಗೆ. ಅನುರಾಗ ಠೇಂಕಾರವೇ ಹಾಗೆ. ಏನಂತೀರಾ..?”

-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಪ್ರತೀಕ್ಷೆ..!

ಹಗಲಿರುಳು
ಒಳಗೊಳಗೆ
ನೆನೆ ನೆನೆದು

ನಿನ್ನ ನೆನಪ
ಧಾರೆಯೊಳಗೆ
ಮಿಂದು ಮಿಂದು

ಒದ್ದೆಯಾದ
ಭಾವದ ಅರಿವೆ
ಹರವಿದ್ದೇನೆ..

ಕವಿತೆಯೆಂಬ
ಬೇಲಿ ಮೇಲೆ
ಬಯಲೊಳಗೆ.!

ನಿನ್ನ ಕಂಗಳ
ಕಿರಣ ತಾಕಿ
ಬೆಚ್ಚಗಾಗಲೆಂದು.!!

ನಿನ್ನ ನಯನ
ರಶ್ಮಿ ಸ್ಫುರಿದು
ಗರಿಯಾಗಲೆಂದು.!

ನಿನ್ನ ಉಸಿರ
ಪವನ ಸೋಕಿ
ನವಿರಾಗಲೆಂದು.!

ನಿನ್ನ ನಗೆಯ
ನಿನಾದ ಹಾದು
ಪುಳಕಿಸಲೆಂದು.!

ನಿನ್ನ ಒಲವ
ಕಂಪು ಸುಳಿದು
ಸೌರಭಿಸಲೆಂದು.!

ನಿನ್ನ ಪ್ರೇಮದ
ತರಂಗ ಹರಿದು
ಪಲ್ಲವಿಸಲೆಂದು..!


-ಎ.ಎನ್.ರಮೇಶ್. ಗುಬ್ಬಿ.