ಅನುದಿನ‌ ಕವನ-೧೭೬೦, ಹಿರಿಯ ಕವಿ:‌ಮಹಿಮ, ಬಳ್ಳಾರಿ

ಹೋದ ದಾರಿಯಲಿ
ಮತ್ತೆ ಹಿಂದಿರುಗಿ ಬಾರದವರು
ಕಾಡುವರು ಮತ್ತೆ ಮತ್ತೆ,

ಮನದೊಳು ಇಣುಕುವರು
ಅಸ್ಪಷ್ಟ ರೂಪ,ಅಸ್ಪಷ್ಟ ಮಾತುಗಳು
ಕನಸಿನೊಳಗೆ,

ಅವರ
ಮನಸಿನೊಳಗೇನಿದೆಯೋ
ಏನು ಹೇಳಲು ಹೊರಟಿರುವರೋ
ಒಂದೂ ಅರ್ಥವಾಗದು,

ಇನ್ನೂ ಬದುಕುವ ಆಸೆಗಳಿದ್ದವರು,
ಏನೇನೋ ಕನಸುಗಳ ಹೊತ್ತಿದ್ದವರು,
ಎಷ್ಟು ಬೇಗ ಮಣ್ಣು ಹೊದ್ದು ಮಲಗಿಬಿಟ್ಟರು..

ಅವರುಗಳು ನೆನಪಾದರೆ ಸಾಕು
ಮಾತುಗಳು ಮೌನ
ಕಂಗಳ ತುಂಬ ಕಂಬನಿ

ನೆನಪುಗಳಲ್ಲಿ ಮತ್ತೆ ಮತ್ತೆ ಅವರುಗಳ ಹುಡುಕುವ ತವಕ,
ನೆನಪುಗಳ ಜಾಲಾಡಿದರೂ
ಸಮಾಧಾನಗೊಳ್ಳದ ಮನಸು,

ಬರುವುದು ಹೋಗುವುದೂ
ಎಲ್ಲಿದೆ ನಮ್ಮಗಳ‌ ಕೈಲಿ..?

ಯಾರದೋ ಕೈಗಳ ಸೂತ್ರದ ಬೊಂಬೆಗಳಾಗಿ ಬಂದು ತೆರಳುವೆವು ಕಾಣದೂರಿಗೆ
ಹಿಂದಿರುಗಿ ಬಾರದೂರಿಗೆ..

ಅನಾಥ ಪ್ರಜ್ಞೆಯಲ್ಲಿಯೇ ಅತಂತ್ರ ಬದುಕು..
ಎಲ್ಲವೂ ಅಸ್ಪಷ್ಟ


-ಮಹಿಮ, ಬಳ್ಳಾರಿ