ಗಜಲ್
ಕಂಡ ಕನಸುಗಳೂ ಹೊತ್ತಿ ಉರಿಯುತಿಹವು ಅವಳಿಲ್ಲದೆ
ಕಂಬನಿಗಳೂ ಪ್ರತಿಸಲ ಕಪ್ಪ ಕೇಳುತಿಹವು ಅವಳಿಲ್ಲದೆ
ವಿರಹವೆಂಬ ಪದವೇ ಇರಲಿಲ್ಲ ಅವಳ ಅಗಲುವವರೆಗೆ
ಚಣಗಳೂ ದಿಕ್ಕುಗಾಣದೆ ಸತ್ತು ಬಿದ್ದಿಹವು ಅವಳಿಲ್ಲದೆ
ಹೂಗಳೆಲ್ಲ ಒಡತಿಯಿಲ್ಲದೆ ಬೆಂಕಿಯಲಿ ಬೆಂದಂತಿಹವು
ಮಳೆಹನಿಗಳು ಸಹ ಕೆಂಡದ ಹನಿಗಳಾಗಿಹವು ಅವಳಿಲ್ಲದೆ
ಮೈಮನಗಳಲೆಲ್ಲ ಸುಡುತಿಹುದು ಅವಳ ನೆನಪಿನ ಕಡಲು
ನೋವುಗಳು ಶೂಲಗಳಾಗಿ ಇರಿಯುತಿಹವು ಅವಳಿಲ್ಲದೆ
ಎಷ್ಟೊಂದು ಭಾರ ನೋವಿನ ಹೆಜ್ಜೆಗಳು ಬದುಕಿನೊಳಗೆ
ಸಿದ್ಧನ ಕಲ್ಪನೆಗಳೇ ಅಪೂರ್ಣವಾಗಿಹವು ಅವಳಿಲ್ಲದೆ

-ಸಿದ್ಧರಾಮ ಕೂಡ್ಲಿಗಿ
