ಗಜಲ್
ಸೋಕಿತು ಒಲವ ತಂಗಾಳಿಯ ಅಲೆಯು ಈ ದಿನ
ನಿನ್ನಿಂದ ಬಾಳಿಗೆ ಪ್ರೀತಿಯ ಹೊಳೆಯು ಈ ದಿನ
ಮಧುರ ಯಾನದ ಪ್ರತಿ ಪುಟವು ಬಣ್ಣದ ಹಾಡು
ಕದಪು ತುಂಬ ಖುಷಿಯ ಕಳೆಯು ಈ ದಿನ
ಸೀಳ್ಳೆ ಹಾಕುತ ಕಂಪು ಬೀರಿದೆ ಸಂಪಿಗೆ
ಕಲ್ಲೆದೆ ಕರಗುವ ಸಲಿಗೆಯ ಮಳೆಯು ಈ ದಿನ
ತವಕಗಳ ಮರೆಸಿದೆ ಹೊಳೆವ ಬಿಸಿಲಕೋಲು
ಕಣ್ಣು ಮಿಟುಕಿಸಿದೆ ನಲ್ಮೆಯ ಇಳೆಯು ಈ ದಿನ
ಇಣುಕಿ ನೋಡಿದರೂ ಸುಳಿಯದ ಏಕಾಂತದ ಪಾಡು
‘ದಿನ್ನಿ’ಗೂ ಅರಿವಾಯಿತು ಒಲುಮೆಯ ಬೆಲೆಯು ಈ ದಿನ

-ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ
(ಮಧು ಬಟ್ಟಲಿನ ಗುಟುಕು -ಕವನ ಸಂಕಲನದಿಂದ)
