ಚಿಂತನಶೀಲ‌ತೆ ಮತ್ತು ವೈಚಾರಿಕತೆ ಬೆಳೆಸುವುದೆ ಶಿಕ್ಷಣ -ಡಾ. ಯು ಶ್ರೀನಿವಾಸ ಮೂರ್ತಿ

ಬಳ್ಳಾರಿ: ತರಗತಿಯಲ್ಲಿ ದೇಶದ ಭವಿಷ್ಯ ನಿರ್ಮಾಣ ವಾಗುತ್ತದೆ, ಮಕ್ಕಳ ಮನಸ್ಸಿನಲ್ಲಿ ವೈಚಾರಿಕತೆ ಮತ್ತು ಚಿಂತನಶೀಲ ಮನೋಭಾವ ಬೆಳೆಸಿದಾಗ ಅದು ಸಾಧ್ಯ ವಾಗುತ್ತದೆ ಎಂದು ಸಾಹಿತಿ ಮತ್ತು ಉಪನ್ಯಾಸಕರಾದ ಡಾ.ಯು.ಶ್ರೀನಿವಾಸ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲಿಪುರ ಸಮೀಪದ ಕೊಳಗಲ್ಲಿನ ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ದಿನಾಚರಣೆ” ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತರಗತಿಯಲ್ಲಿ ಪಡೆಯುವ ಶಿಕ್ಷಣವನ್ನು ಪೂರಕ ಗ್ರಂಥಗಳು ಮತ್ತು ತಮ್ಮ ಯೋಚನಾ ಲಹರಿಯೊಂದಿಗೆ ಸಮೀಕರಿಸಿ ಹೊಸತನದ ಸಂಶೋಧನೆಗೆ ಪ್ರಯತ್ನಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸಬೇಕು ಎಂದರು.
ಬೋಧನೆ, ಕಲಿಕೆ ಮತ್ತು ಪರೀಕ್ಷೆ ಮಾತ್ರ ಶಿಕ್ಷಣ ಅಲ್ಲ, ಅದರಾಚೆ ವೈಚಾರಿಕ ಚಿಂತನೆಗಳು ಮಕ್ಕಳ ಮನದಲ್ಲಿ ಉಂಟಾದಾಗ ದೇಶ ಕಟ್ಟುವಲ್ಲಿ ಅವರ ಪಾತ್ರ ಹಿರಿದಾಗುತ್ತದೆ ಎಂದು ತಿಳಿಸಿದರು. ನಾಗರೀಕ ಮತ್ತು ತಾಂತ್ರಿಕ ಯುಗವಾದ ಇಂದು ಪ್ರತಿ ಕ್ಷಣ ಹೊಸ ಹೊಸ ಸಮಸ್ಯೆಗಳನ್ನು ಸಮಾಜ ಎದುರಿಸುತ್ತಿದೆ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಪಡೆದಾಗ ಶಿಕ್ಷಣದ ಸಾರ್ಥಕತೆ ನೆರವೇರುತ್ತದೆ ಎಂದರು.


ಭಾರತದ ಮೊದಲ ಶಿಕ್ಷಣ ಮಂತ್ರಿಗಾಗಿದ್ದ ಅಬುಲ್ ಮೌಲಾನ ಅಜಾದ್ ಅವರು ಶಿಕ್ಷಣದ ಮಹತ್ವ ಅರಿತು ಕಡ್ಡಾಯ ಶಿಕ್ಷಣ, ಯು.ಜಿ.ಸಿ.ವಯಸ್ಕರ ಶಿಕ್ಷಣ, ಸಂಶೋಧನಾ ಕೇಂದ್ರಗಳನ್ನು ಆರಂಭಿಸಿ ದೇಶದಲ್ಲಿ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ.ಅವರ ಹಾದಿಯಲ್ಲಿ ದೇಶ ಮಹತ್ತರ ಬದಲಾವಣೆ ಕಂಡಿದೆ ಎಂದರು. ಕಾರ್ಯಕ್ರಮದ ಉದ್ಘಾಟಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಅಧ್ಯಕ್ಷರಾದ ಶ್ರೀಮತಿ ಯರ್ರೆಮ್ಮ ತೊಂಟದ್ ಅವರು ಇಲಾಖೆ ನೀಡಿರುವ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಅಲ್ಪಸಂಖ್ಯಾತರ ಬಾಲಕಿಯರ ಪದವಿ ಪೂರ್ವ ಕಾಲೇಜು ನಾಗಯ್ಯ ಹಿರೇಮಠ ಅವರು ಮಾತನಾಡಿ ನೈತಿಕತೆಯನ್ನು ನೀಡುವುದು ಶಿಕ್ಷಣ ಎಂದು ತಿಳಿಸಿದರು.


ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲರಾದ ಮೂಕಪ್ಪ ಕೆ ಎಂ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಶಿಕ್ಷಕರಾದ ಡಾ. ನಾಗರಾಜ ಬಸರಕೋಡು ಪ್ರಾಸ್ತಾವಿಕ ನುಡಿಯೊಂದಿಗೆ ನಿರೂಪಿಸಿದರು. ಶ್ರೀಮತಿ ಯಶೋಧ ಅವರು ಸ್ವಾಗತಿಸಿದರು, ಶ್ರೀ ಮತಿ ಪೂಜಾ ಮಂಡಲ್ ಅವರು ವಂದಿಸಿದರು. ಇದಕ್ಕೂ ಮುನ್ನ ಶಾಲಾ ಆವರಣದಲ್ಲಿ ಜಾಥಾ ನಡೆಸಿ, ಶಿಕ್ಷಣದ ಬಗ್ಗೆ ಘೋಷಣೆ ಕೂಗಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
—–