ಅನುದಿನ ಕವನ-೧೭೮೨, ಕವಿ: ಶಂಕರ್ ಎನ್ ಕೆಂಚನೂರು (ಕೆಂಚನೂರಿನವ), ಕುಂದಾಪುರ

ಹುರಿದು ತಿನ್ನಲು
ಎತ್ತಿಟ್ಟಿದ್ದ ಹಲಸಿನ ಬೀಜ
ತೇವ ತಾಕಿ
ಮೊಳಕೆಗಟ್ಟಿದೆ..

ಕರೆಂಟು ಬಿಲ್ಲು ಕಟ್ಟದ
ಕೋಣೆಗೂ
ವ್ಯವಹಾರ ಗೊತ್ತಿಲ್ಲದ ದಡ್ಡ
ಚಂದಿರ ಬೆಳದಿಂಗಳು ಹರಿಸಿದ್ದಾನೆ

ಸರಿ ರಾತ್ರಿಯಲ್ಲೊಬ್ಬ
ಅಗಂತುಕ ಅತಿಥಿ;
ಈ ಮರಿ ಕಪ್ಪೆಗೆ
ಈ ತಿಂಗಳ ಬಾಡಿಗೆ
ಕಟ್ಟಿಲ್ಲವೆಂಬುದು ತಿಳಿದಿಲ್ಲ

ಕೊನೆಯ ರೈಲು
ಈ ನಿಲ್ದಾಣದಲ್ಲಿ
ಒಂಟಿತನವನ್ನು ಇಳಿಸಿ
ನಿಡುಸುಯ್ಯುತ್ತ ಸಾಗುತ್ತಿದೆ

ಬಸ್ಸು ನಿಲ್ಲದ
ತಂಗುದಾಣ
ಎಲ್ಲೂ ಹೋಗದ
ಮುದುಕಿಯ ವಿಶ್ರಾಂತಿ ಧಾಮ

ರಾತ್ರಿ ಪಾಳಿಯ ಪೋಲಿಸ್
ಖಾಲಿ ರಸ್ತೆಗಳಲ್ಲಿ
ಸೀಟಿ ಊದುವ ಮೂಲಕ
ತನ್ನ ಭಯವನ್ನು ಹೋಗಲಾಡಿಸಿಕೊಳ್ಳುತ್ತಾನೆ

ಈ ರಾತ್ರಿ
ಜನರಲ್ ವಾರ್ಡಿನಲ್ಲೊಂದು
ಖಾಲಿಬೆಡ್
ಅದರ ಮೇಲೆ ಮಲಗಲು
ಕಾಯಿಲೆಯಿಲ್ಲದವರ ಪೈಪೋಟಿ

ವೈದ್ಯರ ಮುಷ್ಕರ;
ಇಂದು ಶವಾಗಾರದಲ್ಲಿ
ತುಸು ಹೆಚ್ಚೇ ಸಂದಣಿ

ಇದೊಂದು
ಕಾಗದದ ಚೂರು
ಮಧ್ಯಾಹ್ನದಿಂದ
ಮೈದಾನಕ್ಕೆ
ಅದೇ ಸುದ್ದಿಯನ್ನು
ಮತ್ತೆ ಮತ್ತೆ ಓದಿ ಹೇಳುತ್ತಿದೆ

-ಶಂಕರ್ ಎನ್ ಕೆಂಚನೂರು (ಕೆಂಚನೂರಿನವ), ಕುಂದಾಪುರ