
ಚಿತ್ರ ಕೃಪೆ: ಶಿವಶಂಕರ ಬಣಗಾರ
ಬಿಸಿಲು ಕಾರಣವಾಗಿ ನೆರಳು ಅರಳುವುದ ಕಂಡಿದ್ದೇನೆ,
ನೆರಳು ಹಾವಳಿಯಾಗಿ ಬಿಸಿಲು ನರಳುವುದ ಕಂಡಿದ್ದೇನೆ.
ನಿನ್ನ ತೋಳ ಸಂತೆಯಲ್ಲಿ ಮುನಿಸುಗಳದ್ದೇ ಕಾರಬಾರು,
ಮುನಿಸು ಕಾರಣವಾಗಿ ಪ್ರೇಮ ಮರಳುವುದ ಕಂಡಿದ್ದೇನೆ.
ದೇಹದ ರಾಜಕಾರಣದಲ್ಲಿ ಪ್ರೀತಿ-ದ್ವೇಷ ಎರಡಕ್ಕೂ ಜಾಗವಿಲ್ಲ,
ಹಕ್ಕು ತಲೆ ಬಾಗಿಸಿದಾಗ ಬದುಕು ಹೊರಳುವುದ ಕಂಡಿದ್ದೇನೆ.
ದ್ವೇಷದ ವಿಷವನ್ನು ಕುಡಿಯುತ್ತಾರೆ ನಗುನಗುತ್ತಲೇ ಜನ,
ಪ್ರೇಮದ ತಮಾಷೆಗೆ ಯಾಕೋ ಕೆರಳುವುದ ಕಂಡಿದ್ದೇನೆ.
ಬದುಕಿನ ಜೂಜಿನಲ್ಲಿ ಪ್ರೇಮ, ಪಣದ ವಿಷಯವಾದಾಗ,
ಮೌನದ ನಿರರ್ಗಳ ದಾಳಕ್ಕೆ ಮಾತು ಉರುಳುವುದ ಕಂಡಿದ್ದೇನೆ.

-ಚಿದಂಬರ ನರೇಂದ್ರ, ಬೆಂಗಳೂರು
