ಬಿಎಂಸಿಆರ್‌ಸಿಯಲ್ಲಿ ಬಾಲಕ ಸಾವು ಪ್ರಕರಣದ ತನಿಖೆಗೆ ಸಮಿತಿ ರಚನೆ: ಡಾ.‌ಗಂಗಾಧರ ಗೌಡ

ಬಳ್ಳಾರಿ: ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಬೆಳಗಿನ ಜಾವ ಅಂದ್ರಾಳು ಗ್ರಾಮದ 8ವರ್ಷದ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿಯಲು ತಜ್ಞ ವೈದ್ಯರ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡ ತಿಳಿಸಿದ್ದಾರೆ.

ಬಿಎಂಸಿಆರ್‌ಸಿಯಲ್ಲಿ ಕೆಲ ದಿನಗಳ ಹಿಂದೆ ಈ ಬಾಲಕನಿಗೆ ಅಂಪೆಡಿಕ್ಸ್‌ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಇದಾದ ಬಳಿಕ ಪುನಃ ಆಸ್ಪತ್ರೆಗೆ ದಾಖಲಾದ ವೇಳೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಬಿಎಂಸಿಆರ್‌ಸಿ ವೈದ್ಯರ ತಂಡ ಬಾಲಕನಿಗೆ ಅಗತ್ಯ ಚಿಕಿತ್ಸೆ ನೀಡಿ, ಬಾಲಕನನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನ ನಡೆಸಿದೆ. ಆದರೂ, ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂಬ ಆರೋಪದ ಹಿನ್ನೆಲೆ ಬಾಲಕನಿಗೆ ಒದಗಿಸಿದ ಚಿಕಿತ್ಸೆವಿಧಾನ, ಬಾಲಕನ ಸಾವಿಗೆ ಕಾರಣವನ್ನು ತಿಳಿಯಲು ಬಿಎಂಸಿಆರ್‌ಸಿಯ ತಜ್ಞ ವೈದ್ಯರ ತನಿಖಾ ತಂಡ ರಚಿಸಲಾಗುವುದು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.