
ತೆಕ್ಕಲಕೋಟೆ, ನ.26: ಸಮಾನತೆ, ಭ್ರಾತೃತ್ವ ಹಾಗೂ ಸಹೋದರತೆ ಸಾರಿದ ದೇಶದ ಸಂವಿಧಾನ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂವಿಧಾನದ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಅವರು ಹೇಳಿದರು.
ಪಟ್ಟಣದ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂವಿಧಾನವನ್ನು ಓದಬೇಕು. ಸಂವಿಧಾನದಲ್ಲಿನ ವಿಷಯಗಳನ್ನು ಅರಿತುಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ನೀಡುವ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಾಕಷ್ಟು ಶ್ರಮವಹಿಸಿ, ಸಂವಿಧಾನ ಎಂಬ ಮಹಾನ್ ಗ್ರಂಥವನ್ನು ದೇಶಕ್ಕೆ ನೀಡಿದ್ದಾರೆ. ಹೀಗಾಗಿ ಅಂಬೇಡ್ಕರ್ ಅವರನ್ನು ನಾವು ಎಂದಿಗೂ ಮರೆಯಬಾರದು. ಸಂವಿಧಾನದಿಂದಲೇ ಸಮಾಜದಲ್ಲಿಪ್ರತಿಯೊಬ್ಬರೂ ಸುಂದರ ಹಾಗೂ ಸಮಾನ ಜೀವನ ನಡೆಸುವಂತಾಗಿದೆ ಎಂದು ತಿಳಿಸಿದರು. ದೇಶದ ಪ್ರತಿಯೊಬ್ಬರೂ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂವಿಧಾನ ಸಹಕಾರಿ ಆಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಓದಿಗೆ ಮೊದಲ ಆದ್ಯತೆ ನೀಡಬೇಕು. ಓದಿನಿಂದಲೇ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.
ಸಂವಿಧಾನದ ಪ್ರಸ್ತಾವನೆ: ಸಂವಿಧಾನ ದಿನಾಚರಣೆ ಸಮಾರಂಭದಲ್ಲಿಬೋಧಕ ಹಾಗೂ ಬೋಧಕೇತರ ಸಿಬ್ಬಮ ಹಾಗೂ ವಿದ್ಯಾರ್ಥಿ,
ವಿದ್ಯಾರ್ಥಿನಿಯರಿಗೆ ಸಂವಿಧಾನದ ಪ್ರಸ್ತಾವನೆ ಓದಿಸಲಾಯಿತು.
ಪತ್ರಿಕೆ ಬಿಡುಗಡೆ: ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಯುವ ಸ್ಫೂರ್ತಿ ಪತ್ರಿಕೆಯನ್ನು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಎ.ಎಸ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಘವೇಂದ್ರ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಪ್ರೊ. ಆಶಾಲತಾ, ಗ್ರಂಥಪಾಲಕರಾದ ಹಸೆನಪ್ಪ ನಾಯಕ, ಅತಿಥಿ ಉಪನ್ಯಾಸಕರಾದ ಡಾ.ರಾಜಣ್ಣ, ಡಾ.ಶಿವಣ್ಣ, ಸುಬಾನ್, ಕುಮಾರ ಸ್ವಾಮಿ, ಪೂರ್ಣಚಂದ್ರ ಇದ್ದರು
—–
